ಬೆಂಗಳೂರು, ಜು, 24 (DaijiworldNews/AK): ನಾನು ವೈಯಕ್ತಿಕ ಹಿತಾಸಕ್ತಿಗಾಗಿ ಯಾವತ್ತೂ ರಾಜಕೀಯ ಮಾಡಿಲ್ಲ ಎಂದ ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಈ ಹಿಂದೆ ಸಿಎಂ ಆಯ್ಕೆ ಮಾಡುವುದು ಗೊತ್ತು, ಕೆಳಗೆ ಇಳಿಸುವುದು ಗೊತ್ತಿದೆ ಎಂದಿದ್ದ ಬಿ.ಕೆ.ಹರಿಪ್ರಸಾದ್ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಯಿತು.
ಆದರೆ ಆದೀಗ ಟ್ವೀಟ್ ಮಾಡಿರುವ ಅವರು, ಸಾಮಾಜಿಕ ಬದಲಾವಣೆಗಾಗಿ ನಾನು ರಾಜಕೀಯಕ್ಕೆ ಬಂದವನು ಎಂದಿದ್ದಾರೆ. ಮಂತ್ರಿ, ಮುಖ್ಯಮಂತ್ರಿ ಸೇರಿ ಯಾವ ಅಧಿಕಾರದ ಮೇಲೂ ಲಾಬಿ ನಡೆಸಿಲ್ಲ. ಅದರ ಮೇಲೆ ಆಸೆಯೂ ಇಲ್ಲ. ಸಾಮಾಜಿಕ ನ್ಯಾಯದ ಪರ ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಮಂತ್ರಿ ಸ್ಥಾನ ಸಿಗದೇ ಇದ್ದುದಕ್ಕೆ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು.
ಇತ್ತೀಚೆಗೆ ಬಿಲ್ಲವ ಮುಖಂಡರ ಸಭೆಯಲ್ಲಿ ಮಾತನಾಡಿದ್ದ ಬಿ.ಕೆ.ಹರಿಪ್ರಸಾದ್, ನಮ್ಮ ಸಮುದಾಯದವರು ರಾಜಕೀಯವಾಗಿ ಮುಂದೆ ಬರುತ್ತಿಲ್ಲ. ನಾವು ಯಾರದ್ದೋ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದೇವೆ ಅನಿಸುತ್ತಿದೆ ಎಂದು ಹೇಳಿದರು.