ಬೆಂಗಳೂರು, ಜು 25 (DaijiworldNews/AK):ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರ ವಿರುದ್ಧ ಶಾಸಕರ ಅಸಮಾಧಾನ ಭುಗಿಲೆದ್ದಿದೆ. ಕೆಲ ಶಾಸಕರು ಪತ್ರದ ಮೂಲಕ ಸಿಎಂ ಸಿದ್ಧರಾಮಯ್ಯಗೆ ಅವರಿಗೆ ಸಚಿವರಿಗೆ ಸೂಕ್ತ ನಿರ್ದೇಶನ ನೀಡುವಂತೆ ದೂರು ನೀಡಿದ್ದಾರೆ.
ಈ ಮೂಲಕ ಕಾಂಗ್ರೆಸ್ ನಲ್ಲಿನ ಕೆಲವು ಸಚಿವರ ಮತ್ತು ಶಾಸಕರ ನಡುವೆ ಅಸಮಾಧಾನ ಇರುವುದು ಕಂಡು ಬಂದಿದೆ. ಸಿಎಂ ಸಿದ್ಧರಾಮಯ್ಯಗೆ ಶಾಸಕರು, ಪರಿಷತ್ ಸದಸ್ಯರಿಂದ ಪತ್ರದಲ್ಲಿ ಸಚಿವರ ದುರಹಂಕಾರಕ್ಕೆ ಬುದ್ದಿ ಹೇಳಿ ಎಂಬುದಾಗಿ ಮನವಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಶಾಸಕ ಬಸವರಾಜ ರಾಯರೆಡ್ಡಿ, ಎಂ.ಕೃಷ್ಣಪ್ಪ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಸಚಿವರ ವಿರುದ್ಧ ಮುಖ್ಯಮಂತ್ರಿಗೆ ದೂರು ನೀಡಲಾಗಿದೆ. ಪ್ರಮುಖವಾಗಿ ಸಿಎಂಗೆ ನೀಡಿರುವ ದೂರಿನಲ್ಲಿ ಸಚಿವರಾರು ಕೆಲಸ ಮಾಡಿ ಕೊಡಲು ಆಸಕ್ತಿ ವಹಿಸುತ್ತಿಲ್ಲ. ಸಚಿವರು ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದಾರೆ. ಹೀಗಾಗಿ ಶಾಸಕಾಂಗ ಸಭೆ ಕರೆದು ಸರಿ ಮಾಡುವಂತೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಇದೀಗ ಶಾಸಕರ ಪತ್ರ ನೋಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಸಮಾಧಾನಗೊಂಡವರಿಗೆ ಸಮಾಧಾನವನ್ನು ಹೇಳಿ ಗುರುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ.