ಶಿವಮೊಗ್ಗ, ಎ04(SS): ನಾವು ಬಿಜೆಪಿಯವರ ಲಿಸ್ಟ್ ಕೊಡುತ್ತೇವೆ. ತಾಕತ್ತಿದ್ದರೆ ಅವರ ಮನೆ ಮೇಲೂ ಐಟಿ ಇಲಾಖೆ ದಾಳಿ ನಡೆಸಲಿ ನೋಡೋಣ ಎಂದು ಸಚಿವ ಡಿ.ಕೆ. ಶಿವಕುಮಾರ್ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧನ ಲಕ್ಷ್ಮೀ, ಧಾನ್ಯ ಲಕ್ಷ್ಮೀ, ದರಿದ್ರ ಲಕ್ಷ್ಮೀ ಎಲ್ಲವೂ ಬಿಜೆಪಿಯವರ ಜೇಬಿನಲ್ಲಿಯೇ ಇವೆ. ಬಿಜೆಪಿಯವರ ಲಿಸ್ಟ್ ನಮ್ಮ ಬಳಿ ಇದೆ. ಅದನ್ನು ನಾವು ಕೊಡುತ್ತೇವೆ. ತಾಕತ್ತಿದ್ದರೆ ಅವರ ಮನೆ ಮೇಲೂ ಐಟಿ ಇಲಾಖೆ ದಾಳಿ ನಡೆಸಲಿ. ನಮ್ಮ ಪಕ್ಷದವರು ನ್ಯಾಯಯುತವಾಗಿದ್ದಾರೆ. ಚುನಾವಣೆಯಲ್ಲಿ ನಮ್ಮವರನ್ನು ಹೆದರಿಸಲು ಐಟಿ ದಾಳಿ ನಡೆಸಲಾಗುತ್ತಿದೆ. ಇದಕ್ಕೆಲ್ಲ ಹೆದರುವ ಪ್ರಶ್ನೆಯೇ ಇಲ್ಲ ಎಂದರು.
ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಮಾಜಿ ಸಿಎಂ ಯಡಿಯೂರಪ್ಪ ಏನನ್ನೂ ಮಾಡಲಿಲ್ಲ. ಆದರೆ ಈಗ ಮಾಡುತ್ತೇನೆ ಅನ್ನುತ್ತಿದ್ದಾರೆ. ಈ ಹಿಂದೆ ಅಚ್ಛೆ ದಿನ್ ಎಂದು ಅವರು ಹೇಳುತ್ತಿದ್ದರು. ಆದರೆ ಯಾವ ವಿಷಯದಲ್ಲಿ ಅಚ್ಛೆ ದಿನ್ ಬಂದಿದೆ ಎಂದು ಅವರೇ ಸ್ಪಷ್ಟಪಡಿಸಬೇಕು ಎಂದು ತಿಳಿಸಿದರು.
ಅಧಿಕಾರ ಕೈಯಲ್ಲಿದ್ದಾಗ ಯಡಿಯೂರಪ್ಪ ಯಾವುದೇ ಅಭಿವೃದ್ಧಿ ಕೆಲಸವನ್ನು ರಾಜ್ಯದಲ್ಲಿ ಮಾಡಿಲ್ಲ. ಇದೀಗ ಎಲ್ಲವನ್ನೂ ನಾನೇ ಮಾಡಿಸಿದ್ದು ಎನ್ನುತ್ತಿದ್ದಾರೆ. ಕೊಟ್ಟ ಕುದುರೆ ಏರದವನು ಧೀರನೂ ಅಲ್ಲ, ಶೂರನೂ ಅಲ್ಲ ಎಂದು ವ್ಯಂಗ್ಯವಾಡಿದರು.