ವಯನಾಡು, ಏ 04(MSP) : ಲೋಕಸಭಾ ಚುನಾವಣೆಗೆ ಕೇರಳದ ವಯನಾಡಿನಿಂದ ಸ್ಪರ್ಧಿಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಸಹೋದರಿ ಪ್ರಿಯಾಂಕಾ ವಾದ್ರಾ ಸಾಥ್ ನೀಡಿದರು. ಕೇರಳದಲ್ಲಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುವ ಇಂದು ಬೆಳಗ್ಗೆ ಸುಮಾರು 11.30ಕ್ಕೆ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದರು. ರಾಹುಲ್ ಗಾಂಧಿ ವಯನಾಡಿನಲ್ಲಿ ಸ್ಪರ್ಧೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ರಾಜಕೀಯ ಕಾವು ಜೋರಾಗಿದೆ.
ನಾಮಪತ್ರ ಸಲ್ಲಿಕೆಗೂ ಮೊದಲು ಕೇರಳ ಕಾಂಗ್ರೆಸ್ ಘಟಕ ಬೃಹತ್ ರ್ಯಾಲಿ ಮತ್ತು ರೋಡ್ ಶೋ ಹಮ್ಮಿಕೊಂಡಿತ್ತು. ಈ ವೇಳೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ರೋಡ್ ಶೋ ಮೂಲಕ ರಾಹುಲ್ ಗಾಂಧಿ ಅವರಿಗೆ ಸ್ವಾಗತ ಕೋರಿದರು. ಅಲ್ಲದೆ ವಯನಾಡ್ ಜಿಲ್ಲಾಧಿಕಾರಿ ಕಚೇರಿವರೆಗೂ ಸಾವಿರಾರು ಮಂದಿ ತೆರಳಿ ರಾಹುಲ್ ಗಾಂಧಿ ಅವರಿಗೆ ಬೆಂಬಲ ಘೋಷಣೆ ಮಾಡಿದರು. ಇನ್ನು ರೋಡ್ ಶೋ ಹಿನ್ನೆಲೆಯಲ್ಲಿ ದಾರಿಯುದ್ದಕ್ಕೂ ಬಿಗಿ ಬಂದೋಬಸ್ತ್ ಏರ್ಪಡಿಸಿ, ತೀವ್ರ ಕಟ್ಟೆಚ್ಚರ ವಹಿಸಲಾಗಿತ್ತು.
ಇನ್ನು ರಾಹುಲ್ ವಿರುದ್ಧ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಭರತ ಧರ್ಮ, ಜನಸೇನಾ ಪಕ್ಷದ ಮುಖ್ಯಸ್ಥ ತುಷಾರ್ ವೆಲ್ಲಿಪಲ್ಲಿ ಕಣಕ್ಕಿಳಿಯಲಿದ್ದಾರೆ.