ಬೆಂಗಳೂರು, ಜು 29 (DaijiworldNews/SM): ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಖುದ್ದು ಹೆದ್ದಾರಿಯನ್ನು ಪರಿಶೀಲಿಸಿದರು.
ಮಂಡ್ಯ ಬಳಿಯ ಎಕ್ಸ್ಪ್ರೆಸ್ವೇ ಅನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಶೀಘ್ರದಲ್ಲೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ, ಎಕ್ಸ್ಪ್ರೆಸ್ವೇಯಲ್ಲಿನ ಕೆಲ ದೋಷಗಳು ಮತ್ತು ಬದಲಾವಣೆಗಳ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.
ಬಿಜೆಪಿ ಸರ್ಕಾರ, ಅಪಘಾತಗಳಿಗೆ ಕಾರಣವಾಗುತ್ತಿರುವ ನ್ಯೂನತೆಗಳನ್ನು ನಿರ್ಲಕ್ಷಿಸಿ ತರಾತುರಿಯಲ್ಲಿ ಎಕ್ಸ್ಪ್ರೆಸ್ವೇ ಉದ್ಘಾಟನೆ ಮಾಡಿದೆ ಎಂದು ಸಿಎಂ ಆರೋಪಿಸಿದರು.
ಸರ್ವೀಸ್ ರಸ್ತೆ ಸುಧಾರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ 81 ಕೋಟಿ ರೂಪಾಯಿ ಪ್ರಸ್ತಾವನೆ ಕಳುಹಿಸಲಾಗಿದೆ. ಅದರಂತೆ ಈ ವರ್ಷ ನವೆಂಬರ್ನಿಂದ ಕಾಮಗಾರಿ ಆರಂಭವಾಗಲಿದೆ ಎಂದರು.
ಇನ್ನೂ ಅಪೂರ್ಣವಾಗಿರುವ ಟೋಲ್ಗಳಲ್ಲಿ ಟೋಲ್ ಸಂಗ್ರಹ ನಡೆಯುತ್ತಿದೆ ಎಂದುಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ಎಚ್ಎಐ) ಟೋಲ್ ವಿಧಿಸುತ್ತಿರುವುದರಿಂದ ಅದರಲ್ಲಿ ರಾಜ್ಯ ಸರ್ಕಾರಕ್ಕೆ ಪಾತ್ರ ಇಲ್ಲ ಎಂದರು.