ಬೆಂಗಳೂರು, ಜು 30 (DaijiworldNews/MS): ಮಾಜಿ ಸಚಿವ ಹಾಗೂ ಹಿರಿಯ ನಾಯಕ ಸಿಟಿ ರವಿ ಬಿಜೆಪಿ ರಾಜ್ಯಾಧ್ಯಕ್ಷರಾಗುವುದು ಬಹುತೇಕ ಪಕ್ಕಾ ಎಂದು ವರದಿಯಾಗಿದೆ. ಏಕೆಂದರೆ ಕೆಲವು ದಿನಗಳ ಹಿಂದೆಯಷ್ಟೇ ರವಿ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಮನೆಗೆ ಭೇಟಿ ನೀಡಿ ಬಳಿಕ ಕಾಲಿಗೆ ಅಡ್ಡಬಿದ್ದು ಆಶೀರ್ವಾದ ಪಡೆದುಕೊಂಡಿದ್ದರು. ವರಿಷ್ಠರ ಸೂಚನೆ ಮೇರೆಗೆ ಸಹಕಾರ ಕೋರುವುದಕ್ಕೆ ರವಿ ಅವರು ಬಿಎಸ್ವೈ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದ ವಿಚಾರ ಈಗ ಬಹಿರಂಗವಾಗಿದೆ.
ಇದಲ್ಲದೇ ಒಬ್ಬರು ಎರಡು ಹುದ್ದೆಯಲ್ಲಿ ಇರಬಾರದು ಎಂಬ ಕಾರಣಕ್ಕೆ ರಾಷ್ಟ್ರೀಯ ಮಂಡಳಿಯಿಂದ ಕೊಕ್ ನೀಡಿ ರಾಜ್ಯ ರಾಜಕಾರಣಕ್ಕೆ ಕಳುಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಸಿ.ಟಿ ರವಿ, ವಿಪಕ್ಷ ನಾಯಕನ ಹುದ್ದೆಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರನ್ನು ಬಿಜೆಪಿ ಪರಿಗಣಿಸಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹೇಳಿದ್ದರು. ಹೀಗಾಗಿ ದೇವಗೌಡ ಭವಿಷ್ಯ ನಿಜವಾಗುತ್ತಾ ಎಂಬ ಕುತೂಹಲ ಮೂಡಿದೆ.