ಕಾರವಾರ,ಏ 05 (MSP): ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಹಾದುಹೋಗುವ ಹೆಚ್ಚಿನ ಚೆಕ್ಪೋಸ್ಟ್ಗಳಲ್ಲಿ ಅವರ ವಾಹನವನ್ನು ತಪಾಸಣೆ ಮಾಡಲಾಗುತ್ತಿದೆ. ಇದರಿಂದ ಸಿಡಿಮಿಡಿಗೊಂಡಿರುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ನಮ್ಮ ವಾಹನವನ್ನು ಪದೇ ಪದೇ ತಪಾಸಣೆ ಮಾಡುವುದರಿಂದ ಏನು ಸಾಬೀತು ಮಾಡಲಾಗುತ್ತದೆ ? ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಪ್ರಚಾರದ ಪ್ರಯುಕ್ತ ರಾಜ್ಯದ ಹಲವು ಕಡೆ ಪ್ರವಾಸ ಮಾಡಬೇಕಾದ ಸಂದರ್ಭದಲ್ಲಿ ಹಲವೆಡೆ ಚೆಕ್ ಪೋಸ್ಟ್ ಗಳಲ್ಲಿ ಅವರ ವಾಹನವನ್ನು ತಪಾಸಣೆ ಮಾಡಲಾಗಿದೆ. ಈ ಕಾರಣಕ್ಕೆ ಸಿಎಂ ಕುಮಾರಸ್ವಾಮಿ ಸಿಡಿಮಿಡಿಗೊಂಡಿದ್ದಾರೆ. ಕಾರವಾರದ ಜೆಡಿಎಸ್ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಕಾರವಾರಕ್ಕೆ ತೆರಳುವ ಸಂದರ್ಭವೂ ಸಿಎಂ ವಾಹನ ಪರಿಶೀಲನೆ ಮಾಡಲಾಗಿದೆ. ಇದಲ್ಲದೆ ಗೋಕರ್ಣ ಮತ್ತು ಕಾರವಾರ ಮಧ್ಯೆ ಎರಡು ಬಾರಿ ತಪಾಸಣೆ ನಡೆಸಲಾಗಿತ್ತು. ಇದೇ ಕಾರಣಕ್ಕೆ ಅಸಮಧಾನಗೊಂಡಿರುವ ಸಿಎಂ ಕುಮಾರಸ್ವಾಮಿ ’ನಮ್ಮ ವಾಹನವನ್ನು ಪದೇ ಪದೇ ತಪಾಸಣೆ ಮಾಡಿ ಎಂದು ಚುನಾವಣಾ ಆಯೋಗದಿಂದ ಅಧಿಕಾರಿಗಳಿಗೆ ಆದೇಶ ಬಂದಿರಬಹುದು ಎಂದು ಸಂಶಯ ವ್ಯಕ್ತಪಡಿಸುತ್ತಾರೆ.