ಬೆಂಗಳೂರು, ಎ08(SS): ನಗರದ ಪೂರ್ಣಪ್ರಜ್ಞ ವಿದ್ಯಾಪೀಠ ಆವರಣದಲ್ಲಿ ಆಯೋಜಿಸಿದ್ದ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆ ನಡೆದಿದೆ.
ಉಪನ್ಯಾಸ ನೆಪದಲ್ಲಿ ಚಕ್ರವರ್ತಿ ಸೂಲಿಬೆಲೆ ಮತಯಾಚನೆ ಮಾಡಲು ಬಂದಿದ್ದು, ಒಂದು ಪಕ್ಷದ ಪರ ಭಾಷಣ ಮಾಡಲು ಅವಕಾಶ ನೀಡಬಾರದು ಎಂದು ಕಾರ್ಯಕ್ರಮಕ್ಕೂ ಮೊದಲೇ ಬಂದಿದ್ದ ಕಾಂಗ್ರೆಸ್ 15 ಕಾರ್ಯಕರ್ತರು ಅಡ್ಡಿಪಡಿಸಲು ಮುಂದಾದರು. ಪರಿಣಾಮ, ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಕೆಲವರು ಕೆರಳಿ, ಮೋದಿ ಪರ ಘೋಷಣೆ ಕೂಗಿದರು. ಆಕ್ರೋಶಗೊಂಡ ಕೈ ಕಾರ್ಯಕರ್ತರು ರಾಹುಲ್ ಗಾಂಧಿ ಪರ ಘೋಷಣೆ ಕೂಗಿದರು.
ಈ ವಿಚಾರವಾಗಿ ಎರಡೂ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು, ಗೊಂದಲದ ವಾತಾವರಣ ಸೃಷ್ಟಿಯಾಯಿತು. ಈ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಎರಡು ಕಡೆಯವರನ್ನು ಸಮಾಧಾನ ಪಡಿಸಿದರು.
ಈ ಘಟನೆಯ ಮಧ್ಯೆಯೂ ಚಕ್ರವರ್ತಿಯವರು ಕಾರ್ಯಕ್ರಮದಲ್ಲಿ ’ಭಾರತ ವೈಭವ’ದ ಕಥನವನ್ನು ಸಂಪೂರ್ಣ ಜನರ ಮುಂದಿಟ್ಟರು. ಕಾಂಗ್ರೆಸ್ಸಿನವರು ವಿರೋಧ ವ್ಯಕ್ತಪಡಿಸುತ್ತಿದ್ದರೆ ಒಂದಷ್ಟು ದೇಶಭಕ್ತರು ವಂದೇ ಮಾತರಂ, ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿ ಕಾಂಗ್ರೆಸ್ಸಿಗರ ಬಾಯ್ಮುಚ್ಚಿಸಿದರು ಎಂದು ಟೀಂ ಮೋದಿ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದೆ.