ವಯನಾಡ್,ಏ 08 (MSP): ರಾಹುಲ್ ಗಾಂಧಿ ತಮ್ಮ ಎರಡನೇ ಉಮೇದುವಾರಿಕೆಯನ್ನು ವಯನಾಡ್ ಸಲ್ಲಿಸಿದ್ದೇಕೆ ಎನ್ನುವುದೇ ಕುತೂಹಲಕಾರಿ ವಿಚಾರ. ಒಂದು ಕಾಲದಲ್ಲಿ ಕೇರಳ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ಆದರೆ ಕಾಲ ಕಳೆದಂತೆ ಕೇರಳದಲ್ಲಿ ಕಾಂಗ್ರೆಸ್ ಕ್ಷೀಣಿಸುತ್ತಾ, ಎಡಪಕ್ಷಗಳು ಕೇರಳದಲ್ಲಿ ಪ್ರಾಬಲ್ಯ ಸಾಧಿಸಿತ್ತು. ಕೇರಳದಲ್ಲಿ ಕಾಂಗ್ರೆಸ್ ಗೆದ್ದರೂ ಗೆಲ್ಲುವ ಅಂತರಗಳು ತೀರಾ ಕಡಿಮೆಯಾಗಿದೆ. ಹೀಗಾಗಿ ಕೇರಳದಲ್ಲಿ ಕಾಂಗ್ರೆಸ್ ಇನ್ನೂ ಜೀವಂತವಾಗಿದೆ , ನಾನು ನಿಮ್ಮೊಂದಿಗಿದ್ದೀನೆ ಎನ್ನುವ ಸಂದೇಶ ಕೇರಳ ಕಾಂಗ್ರೆಸ್ಸಿಗರಿಗೆ ನೀಡುವುದು ಅನಿವಾರ್ಯವಾಗಿತ್ತು. ಈ ಮೂಲಕ ಕೇರಳದ ಅಕ್ಕಪಕ್ಕದ ರಾಜ್ಯಗಳಾದ ಕರ್ನಾಟಕ, ತಮಿಳುನಾಡಿಗೂ ಪ್ರಭಾವ ಬೀರಬಹುದು ಎನ್ನುವುದು ರಾಹುಲ್ ಲೆಕ್ಕಚಾರ.
ಇದಲ್ಲದೆ ರಾಹುಲ್ ಗೆ ವಯನಾಡ್ ಬಗ್ಗೆ ಒಂದು ರೀತಿಯ ಭಾವನಾತ್ಮಕ ಸಂಬಂಧ ಹೊಂದಿರುವ ಸಾಧ್ಯತೆ ಇದೆ. ಯಾಕೆಂದರೆ 1991 ರಲ್ಲಿ ತಂದೆ ರಾಜೀವ್ ಗಾಂಧಿ ಶ್ರೀಪೆಂಬದೂರಿನಲ್ಲಿ ಚುನಾವಣೆ ಪ್ರಚಾರದ ವೇಳೆ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಹತ್ಯೆಗೀಡಾಗಿದ್ದು, ಬಳಿಕ ರಾಜೀವ್ ಗಾಂಧಿ ಅವರ ಚಿತಾಭಸ್ಮವನ್ನು ವಯನಾಡಿನ ಪ್ರಸಿದ್ದ ಮಹಾವಿಷ್ಟು ದೇಗುಲವಿರುವ ತಿರುವೆಲ್ಲಿ ಗ್ರಾಮದಲ್ಲಿ ಹರಿಯುವ ಪಾಪನಾಶಿನಿಯಲ್ಲಿ ವಿಸರ್ಜಿಸಲಾಗಿದೆ. ಹೀಗಾಗಿ ಶೀಘ್ರವೇ ರಾಹುಲ್ ಈ ದೇಗುಲಕ್ಕೂ ಭೇಟಿ ನೀಡುವ ನಿರೀಕ್ಷೆ ಇದೆ.
ಇದಲ್ಲದೆ ಕೇರಳದಲ್ಲಿ ಕಳೆದ ಹಲವು ಚುನಾವಣೆಗಳಲ್ಲಿ ಬಿಜೆಪಿ ಮತಗಳಿಗೆ ಪ್ರಮಾಣ ವೃದ್ದಿಸುತ್ತಿದೆ. ಹಿಂದೂ ಮತಗಳು ಬಿಜೆಪಿಯತ್ತ ತಿರುಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ರಾಹುಲ್ ಕೇರಳದ ವಯನಾಡ್ ನ್ನು ಆಯ್ಕೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ.