ನವದೆಹಲಿ, ಆ 13 (DaijiworldNews/AK): ಹೊಸ ಪಠ್ಯಪುಸ್ತಕಗಳ ಪರಿಷ್ಕರಣೆ, ರಚನೆಗೆ ಎನ್ಸಿಇಆರ್ಟಿಯ 19 ಸದಸ್ಯರ ಸಮಿತಿಗೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಹಾಗೂ ಶಂಕರ್ ಮಹಾದೇವನ್ ಅವರನ್ನು ಆಯ್ಕೆ ಮಾಡಲಾಗಿದೆ.
ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ, ಸಂಗೀತ ಮಾಂತ್ರಿಕ ಶಂಕರ್ ಮಹಾದೇವನ್, ಅರ್ಥಶಾಸ್ತ್ರಜ್ಞ ಸಂಜೀವ್ ಸನ್ಯಾಲ್ ಮತ್ತು 16 ಇತರರು ಹೊಸ ಪಠ್ಯಕ್ರಮದ ಪ್ರಕಾರ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಎನ್ಸಿಇಆರ್ಟಿ ರಚಿಸಿರುವ ಹೊಸ ಸಮಿತಿಯ ಭಾಗವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಸ್ತೂರಿರಂಗನ್ ನೇತೃತ್ವದ ಸ್ಟೀರಿಂಗ್ ಸಮಿತಿಯು ಅಭಿವೃದ್ಧಿಪಡಿಸಿದ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿ 2020 ಪಠ್ಯಕ್ರಮವನ್ನು ಸೇರಿಸಲು ಈ ಸಮಿತಿ ಕೆಲಸ ಮಾಡಲಿದೆ.
ಅಂತಿಮ ಎನ್ಸಿಎಫ್-ಎಸ್ಇ ಅನ್ನು ಈಗಾಗಲೇ ಶಿಕ್ಷಣ ಸಚಿವಾಲಯದೊಂದಿಗೆ ಸಲ್ಲಿಸಲಾಗಿದ್ದರೂ, ಅದನ್ನು ಇನ್ನೂ ಸಾರ್ವಜನಿಕ ವಲಯದಲ್ಲಿ ಬಿಡುಗಡೆ ಮಾಡಲಾಗಿಲ್ಲ. ಚೌಕಟ್ಟಿನ ಕರಡನ್ನು ಏಪ್ರಿಲ್ನಲ್ಲಿ ಬಿಡುಗಡೆ ಮಾಡಲಾಯಿತು.
ಶಾಲಾ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಲು ಎನ್ಎಸ್ಟಿಸಿ ಗೆ ಅಧಿಕಾರ ನೀಡಲಾಗುವುದು. 19-ಸದಸ್ಯರ ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆ ಕುಲಪತಿ ಎಂ.ಸಿ ಪಂತ್ ನೇತೃತ್ವದಲ್ಲಿರುತ್ತದೆ. ಅದಲ್ಲದೇ 3ನೇ ತರಗತಿಯಿಂದ 12 ತರಗತಿಯವರೆಗೆ ಬೋಧನೆ ಮತ್ತು ಕಲಿಕೆಯ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸುವುದೂ ಎನ್ಎಸ್ಟಿಸಿಯ ಜವಾಬ್ದಾರಿಯಾಗಲಿದೆ.