ನವದೆಹಲಿ,ಏ08(AZM):ಪುಲ್ವಾಮ ದಾಳಿಗೆ ಪ್ರತ್ಯುತ್ತರವಾಗಿ ಫೆ.೨೭ರಂದು ಭಾರತ ಪಾಕ್ ಮೇಲೆ ನಡೆಸಿದ ಕಾದಾಟದಲ್ಲಿ ಪಾಕಿಸ್ತಾನದ ಅಮೆರಿಕ ನಿರ್ಮಿತ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಕ್ಕೆ ವಿಶ್ವಾಸಾರ್ಹ ಸಾಕ್ಷ್ಯವೊಂದು ದೊರಕಿದೆ. ಆದರೆ ಇದನ್ನು ಗೋಪ್ಯತಾ ಕಾರಣಕ್ಕೆ ಸಾರ್ವಜನಿಕವಾಗಿ ಹಂಚಿಕೊಳ್ಳಲು ಭಾರತೀಯ ವಾಯು ಸೇನೆಗೆ ನಿರ್ಬಂಧವಿದೆ ಎಂದು ಅಸಿಸ್ಟೆಂಟ್ ಚೀಫ್ ಆಫ್ ಏರ್ ಸ್ಟಾಫ್ ಆರ್.ಜಿ.ಕೆ.ಕಪೂರ್ ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, ಪಾಕಿಸ್ತಾನ ವಾಯು ಪಡೆಯ ಎಫ್ 16 ದಾಳಿಯ ಸಂಪೂರ್ಣ ಮಾಹಿತಿ ಮತ್ತು ರೇಡಿಯೋ- ಟೆಲಿಫೋನಿ ವಿವರಗಳು ಭಾರತೀಯ ವಾಯು ಸೇನೆಗೆ ದೊರೆತಿದ್ದು, ಅದನ್ನು ಸಾಕ್ಷ್ಯವಾಗಿ ಸಾರ್ವಜನಿಕರ ಮುಂದೆ ಇಡಲು ಸಾಧ್ಯವಿಲ್ಲ. ಅದು ಭದ್ರತೆ ಹಾಗೂ ಗೋಪ್ಯತೆಗೆ ಸಂಬಂಧಿಸಿದ ವಿಷಯ ಎನ್ನಲಾಗಿದೆ.
ಭಾರತೀಯ ವಾಯು ಸೇನೆಯು ಬಾಲಕೋಟ್ ದಾಳಿಯನ್ನೂ ಯಶಸ್ವಿಯಾಗಿ ಪೂರೈಸಿತು. ಅದರ ಮರು ದಿನ ಅಂದರೆ ಫೆಬ್ರವರಿ ಇಪ್ಪತ್ತೇಳರಂದು ಪಾಕಿಸ್ತಾನ ವಾಯು ಸೇನೆಯು ಭಾರತದ ಸೇನಾ ಪ್ರದೇಶಗಳ ಮೇಲೆ ನಡೆಸಿದ ಪ್ರತಿ ದಾಳಿಯನ್ನೂ ಹಿಮ್ಮೆಟ್ಟಿಸಿದ್ದೇವೆ ಎಂದು ಕಪೂರ್ ಹೇಳಿದ್ದಾರೆ.
ರಾಡಾರ್ ನಲ್ಲಿ ಸೆರೆಯಾದ ಚಿತ್ರದಲ್ಲಿ ವಿಂಗ್ ಕಮ್ಯಾಂಡರ್ ಅಭಿನಂದನ್ ವಿರುದ್ಧವಾಗಿ ಹಲವು ಎಫ್ 16 ಯುದ್ಧ ವಿಮಾನಗಳು ಕಂಡುಬರುತ್ತವೆ. ಎರಡನೇ ಚಿತ್ರದಲ್ಲಿ, ಹತ್ತು ಸೆಕೆಂಡ್ ಗಳ ನಂತರ ಒಂದು ಎಫ್ 16 ನಾಪತ್ತೆ ಆಗಿರುವುದು ಕಂಡುಬರುತ್ತದೆ. "ಅದು ಪಾಕಿಸ್ತಾನ ವಾಯು ಸೇನೆ ಕಳೆದುಕೊಂಡ ಎಫ್ 16" ಎಂದು ಅಧಿಕಾರಿ ಹೇಳಿದ್ದಾರೆ.