ವಿಜಯಪುರ, ಆ 14(DaijiworldNews/MS): ಮುಂದಿನ ಆರೇಳು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಿ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.
ಚುನಾವಣೆಯಲ್ಲಿ ತಮ್ಮ ವಿಜಯಕ್ಕಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರಿಗೇ ಕೊಡುವುದಕ್ಕೆ ಸರ್ಕಾರದಲ್ಲಿ ಅನುದಾನ ಇಲ್ಲ. ಹೀಗಾಗಿ ಅವರ ಶಾಸಕರೇ ಅಳುತ್ತಿದ್ದಾರೆ. ಇನ್ನು, ವಿರೋಧ ಪಕ್ಷದ ನಮಗೆ ಎಲ್ಲಿಂದ ಅನುದಾನ ಕೊಡ್ತಾರೆ? ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮದ್ಯೆ ಪೈಪೋಟಿ ಇದ್ದು ಇವರಿಬ್ಬರ ಮಧ್ಯೆ ಶಾಸಕರು ನಮಗೇನು ಸಿಗುತ್ತಿಲ್ಲ ಅಂತ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಇನ್ನು, ಆರೇಳು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬೀಳುತ್ತದೆ. ಕಾರ್ಯಕರ್ತರು ಸಮಾಧಾನದಿಂದ ಇರಬೇಕುಎಂದು ಹೇಳಿದ್ದಾರೆ.
ಬಹಳಷ್ಟು ಕಾರಣಗಳಿಂದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಯಿತು. ಕಾಂಗ್ರೆಸ್ ಗ್ಯಾರಂಟಿ ಘೋಷಣೆ, ಬಿಜೆಪಿ ಸರ್ಕಾರದಲ್ಲಿ ಕೆಲವು ಸಚಿವರು ಮಾಡಿದ ಭ್ರಷ್ಟಾಚಾರ, ಬಿಜೆಪಿ ಸರ್ಕಾರದಲ್ಲಿ ಹಿಂದುತ್ವ ನಿರ್ಲಕ್ಷ್ಯ ಈ ಕಾರಣಗಳಿಂದ ಚುನಾವಣೆಯಲ್ಲಿ ಬಿಜೆಪಿಗೆ ಪೆಟ್ಟು ಬೀಳುವಂತಾಯಿತು. ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸೋಣ ಎಂದು ಇದೇ ವೇಳೆ ಕರೆ ನೀಡಿದರು.