ನವದೆಹಲಿ,ಏ08(AZM):ಪುಲ್ವಾಮ ದಾಳಿ ನಡೆಯಲು ಕೇಂದ್ರವೇ ಅವಕಾಶ ನೀಡಿದ್ದು, ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಗೆಲುವಿಗೆ ನೆರವಾಗಲು ಈ ದಾಳಿ ನಡೆದಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ನ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಗಂಭೀರ ಆರೋಪವೆಸಗಿದ್ದಾರೆ.
ಮೇ 31ರವರೆಗೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾರಕ್ಕೆ ಎರಡು ದಿನ ನಾಗರಿಕ ವಾಹನಗಳ ಸಂಚಾರವನ್ನು ನಿಷೇಧಿಸಿರುವುದರ ವಿರುದ್ಧ ರವಿವಾರ ನಡೆದ ಧರಣಿ ಮುಷ್ಕರದ ನೇತೃತ್ವ ವಹಿಸಿದ್ದ ಅಬ್ದುಲ್ಲಾ ಅವರು, ಈ ಆರೋಪವೆಸಗಿದ್ದಾರೆ. ದಾಳಿಗೆ ಸ್ಫೋಟಕಗಳು ಎಲ್ಲಿಂದ ಬಂದಿದ್ದವು ಎಂದು ಪ್ರಶ್ನಿಸಿದ ಅವರು, ಪ್ರಧಾನಿ ಮೋದಿಯವರಿಗೆ ಚುನಾವಣೆಯನ್ನು ಗೆಲ್ಲಬೇಕಿತ್ತು,ಅದಕ್ಕಾಗಿ ಅವರು ಈ ದುಸ್ಸಾಹಸವನ್ನು ಮಾಡಿದ್ದರು'' ಎಂದು ಹೇಳಿದರು. ''ಈ ದಾಳಿಯ ರೂವಾರಿಗಳು ಅವರೇ ಎಂದು ಇಂದೂ ನಾನು ಹೇಳುತ್ತೇನೆ. ಈಗ ನಾವು,ಜನತೆ ಶಿಕ್ಷೆ ಅನುಭವಿಸುತ್ತಿದ್ದೇವೆ '' ಎಂದರು.
ನಾಗರಿಕ ವಾಹನಗಳ ಸಂಚಾರದ ಮೇಲಿನ ನಿಷೇಧ ಸರ್ವಾಧಿಕಾರದಿಂದ ಕೂಡಿದೆ ಎಂದು ಬಣ್ಣಿಸಿದ ಅವರು,ನಮ್ಮನ್ನು ವಸಾಹತು ಎಂದು ಪರಿಗಣಿಸಲಾಗಿದೆಯೇ ಅಥವಾ ನಾವು ಸ್ವತಂತ್ರ ಭಾರತದಲ್ಲಿ ವಾಸವಿದ್ದೇವೆಯೇ ಎಂದು ಪ್ರಶ್ನಿಸಿದರು. ನಿಷೇಧವನ್ನು ತಕ್ಷಣ ಹಿಂದೆಗೆದುಕೊಳ್ಳುವಂತೆ ಅವರು ಆಗ್ರಹಿಸಿದರು.
ಸರಕಾರವು ಭದ್ರತಾ ಪಡೆಗಳನ್ನು ಸಾಗಿಸಲು ರೈಲುಗಳನ್ನು ಬಳಸಬಹುದಿತ್ತು ಅಥವಾ ನಾಗರಿಕರಿಗೆ ತೊಂದರೆಯನ್ನು ತಗ್ಗಿಸಲು ರಾತ್ರಿ ವೇಳೆ ಭದ್ರತಾ ಪಡೆಗಳ ವಾಹನಗಳನ್ನು ಸಾಗಿಸಬಹುದಿತ್ತು ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.