ನವದೆಹಲಿ, ಆ 15 (DaijiworldNews/HR): ದೇಶ ಎಂದಿಗೂ ಮರೆಯದಂಥ ಹೆಸರೆಂದರೆ ಅದು ಪಿಂಗಾಳಿ ವೆಂಕಯ್ಯ, ಇವರು ಸ್ವಾತಂತ್ರ್ಯ ಹೋರಾಟಗಾರ, ಜೊತೆಗೆ ಭಾರತಕ್ಕೆ ತನ್ನದೇ ಆದ ಧ್ವಜವೊಂದನ್ನು ರೂಪಿಸಿಕೊಟ್ಟ ಮಹಾನ್ ವ್ಯಕ್ತಿ.
1876 ಆ. 2ರಂದು ವೆಂಕಯ್ಯ ಅವರು ಆಂಧ್ರಪ್ರದೇಶದ ಮಚಲಿಪಟ್ಟಣಂ ಬಳಿ ಇರುವ ಭಾಟ್ಲ ಪೆನುಮಾರು ಎನ್ನುವ ಊರಲ್ಲಿ ಜನಿಸಿದ್ದು, 19 ವರ್ಷವಿರುವಾಗ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದ ಅವರು, ವಾಪಸ್ ಬಂದು ಧ್ವಜ ರೂಪಿಸಿದ್ದರು.
ಪಿಂಗಾಳಿ ವೆಂಕಯ್ಯ ಅವರು ತಮ್ಮ 19ನೇ ವಯಸ್ಸಿನಲ್ಲಿಯೇ ದಕ್ಷಿಣ ಆಫ್ರಿಕಾಗೆ ಹೋಗಿ ಬ್ರಿಟಿಷ್ ಸೇನೆಗೆ ಸೇರಿ ಬ್ರಿಟನ್ ಪರವಾಗಿ ಹೋರಾಡಲು ಅಲ್ಲಿಗೆ ಹೋಗಿದ್ದರು. ಅಲ್ಲಿ ಬ್ರಿಟಿಷ್ ಸೇನಾಧಿಕಾರಿ ಬ್ರಿಟನ್ ಧ್ವಜಕ್ಕೆ ವಂದಿಸುವಂತೆ ತನ್ನೆಲ್ಲ ಸೈನಿಕರಿಗೆ ಹೇಳುತ್ತಿದ್ದ. ಆದರೆ ಪಿಂಗಾಳಿ ವೆಂಕಯ್ಯ ಅವರಿಗೆ ಇದು ಇಷ್ಟವಾಗಲಿಲ್ಲ. ಹೀಗಾಗಿ ಅವರು ಭಾರತಕ್ಕೆ ವಾಪಸ್ ಹೋಗಿ, ಭಾರತಕ್ಕೆ ಒಂದು ಧ್ವಜ ರೂಪಿಸಬೇಕು ಎಂದುಕೊಂಡರು.
ರಾಷ್ಟ್ರಧ್ವಜ ವಿನ್ಯಾಸ ಪಿಂಗಾಳಿ ವೆಂಕಯ್ಯಗೆ ಧ್ವಜ ಮತ್ತು ಅವುಗಳ ವಿನ್ಯಾಸ ಎಂದರೆ ಬಹಳ ಕುತೂಹಲವಾಗಿದ್ದು, ಅನೇಕ ದೇಶಗಳ ರಾಷ್ಟ್ರಧ್ವಜಗಳ ವಿನ್ಯಾಸವನ್ನು ಅಧ್ಯಯನ ಮಾಡುತ್ತಾರೆ. 1916ರಿಂದ 1921ರವರೆಗೂ ಅವರು ಧ್ವಜಗಳ ಅಧ್ಯಯನದಲ್ಲಿ ನಿರತರಾಗಿ ಕೊನೆಗೆ ಸ್ವತಂತ್ರ ಭಾರತಕ್ಕಾಗಿ ವಿವಿಧ ಧ್ವಜ ವಿನ್ಯಾಸಗಳನ್ನು ಮಾಡುತ್ತಾರೆ. 1921ರಲ್ಲಿ ಮಹಾತ್ಮ ಗಾಂಧಿಯನ್ನು ಪಿಂಗಾಳಿ ವೆಂಕಯ್ಯ ಮತ್ತೊಮ್ಮೆ ಭೇಟಿ ಮಾಡಿ ಅಲ್ಲಿ ತಮ್ಮ ರಾಷ್ಟ್ರಧ್ವಜದ ವಿನ್ಯಾಸಗಳನ್ನು ತೋರಿಸುತ್ತಾರೆ. ಆ ಧ್ವಜಕ್ಕೆ ಕೆಲ ಮಾರ್ಪಾಡುಗಳನ್ನು ಮಾಡಲಾಗುತ್ತದೆ. ಅಂತಿಮವಾಗಿ ತ್ರಿವರ್ಣ ಇರುವ ಧ್ವಜವನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಂತಿಮಗೊಳಿಸುತ್ತದೆ.
1921ರಲ್ಲಿ ಮೊದಲ ಬಾರಿಗೆ ಮಹಾತ್ಮ ಗಾಂಧಿಯವರಿಗೇ ಧ್ವಜ ನೀಡಿ ಬಳಿಕ ಇದರ ವಿನ್ಯಾಸವನ್ನು ಬದಲಿಸಿಕೊಟ್ಟಿದ್ದರು.
ಇನ್ನು ವೆಂಕಯ್ಯ ಅವರು ಕೇವಲ ಸೈನಿಕರಾಗಿರಲಿಲ್ಲ. ಅವರೊಬ್ಬ ರೈತ, ಉಪನ್ಯಾಸಕ, ಜಿಯಾಲಜಿಸ್ಟ್ ಕೂಡ ಆಗಿದ್ದರು.ಜಪಾನ್ ಭಾಷೆಯಲ್ಲೂ ಪರಿಣತರಾಗಿದ್ದ ಅವರು, ಜಪಾನ್ ವೆಂಕಯ್ಯ ಎಂದೇ ಪರಿಚಿತರಾಗಿದ್ದರು.
2009ರಲ್ಲಿ ವೆಂಕಯ್ಯ ಅವರ ಹೆಸರಿನಲ್ಲಿ ಕೇಂದ್ರ ಸರಕಾರ ಅಂಚೆ ಚೀಟಿಯೊಂದನ್ನು ತಂದಿದ್ದು, 2014ರಲ್ಲಿ ವಿಜಯವಾದ ರೈಲ್ವೇ ನಿಲ್ದಾಣ ಮತ್ತು ಅಲ್ಲಿನ ಆಕಾಶವಾಣಿಗೆ ಇವರ ಹೆಸರನ್ನು ಇಡಲಾಗಿದೆ.
ಧ್ವಜದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳು ನಮ್ಮ ದೇಶದ ಗುಣ ಏನೆಂದು ಬಿಂಬಿಸುತ್ತವೆ. ಒಂದೊಂದು ಬಣ್ಣಕ್ಕೂ ಅದರದ್ದೇ ಅರ್ಥಗಳಿವೆ. ಧೈರ್ಯ, ತ್ಯಾಗ, ಶಾಂತಿ ಮತ್ತು ಪ್ರಗತಿಯ ಸಂಕೇತಗಳಾಗಿವೆ.