ಜೈಪುರ, ಆ 15 (DaijiworldNews/MS): ಇಬ್ಬರು ಮಕ್ಕಳ ತಾಯಿಯೊಬ್ಬರು ತನ್ನ ಮುಸ್ಲಿಂ ಸ್ನೇಹಿತನೊಂದಿಗೆ ಕುವೈತ್ಗೆ ಪರಾರಿಯಾಗಿರುವ ಘಟನೆ ರಾಜಸ್ಥಾನದ ಡುಂಗರ್ಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೀಪಿಕಾ ಪಾಟಿದಾರ್ (35) ಎಂಬಾಕೆ ತನ್ನ ಸ್ನೇಹಿತ ಇರ್ಫಾನ್ ಹೈದರ್ ಜೊತೆ ಪರಾರಿಯಾಗಿದ್ದಾಳೆ. ಮಹಿಳೆ ಬುರ್ಖಾ ಧರಿಸಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ಆಕೆಯ ಕುಟುಂಬಕ್ಕೆ ಈ ವಿಷಯ ತಿಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯ ಪಲಾಯನದ ಸುದ್ದಿ ಸಾರ್ವಜನಿಕವಾಗುತ್ತಿದ್ದಂತೆ, ಪಾಟಿದಾರ್ ಸಮಾಜ ಮತ್ತು ಇತರ ಹಿಂದೂ ಸಂಘಟನೆಗಳು ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಪತ್ರ ನೀಡಿದೆ
ದೀಪಿಕಾ ಅವರ ಪತಿ ಮುಖೇಶ್ ಪಾಟಿದಾರ್ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಜುಲೈ 15ರಂದು ಪತ್ನಿ ನಾಪತ್ತೆಯಾಗಿರುವ ಬಗ್ಗೆ ದೂರು ಸಲ್ಲಿಸಿದ್ದರು. ದೀಪಿಕಾ ಪಾಟಿದಾರ್ ಜೊತೆ ಮಗ ಮತ್ತು ಮಗಳ ಚಿತ್ರವನ್ನು ಹಂಚಿಕೊಂಡ ಮುಖೇಶ್ ಪಾಟಿದಾರ್ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಹೈದರ್ ತನ್ನ ಹೆಂಡತಿಯನ್ನು ಬ್ರೈನ್ ವಾಶ್ ಮಾಡಿ ಅವಳನ್ನು ಇಸ್ಲಾಂಗೆ ಪರಿವರ್ತಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ಹೈದರ್ ಗುಜರಾತ್ನ ಹಿಮ್ಮತ್ ನಗರ ನಿವಾಸಿಯಾಗಿದ್ದು, ಆತನನ್ನು ಭೇಟಿ ಮಾಡಲು ದೀಪಿಕಾ ಆಗ್ಗಾಗ್ಗೆ ಗುಜರಾತ್ಗೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆ ಹೈದರ್ನನ್ನು ಹೇಗೆ ಭೇಟಿಯಾಗಿರುವುದು ಮತ್ತು ವೀಸಾ ಪಡೆದುಕೊಂಡಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಈ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.