ಬೆಂಗಳೂರು, ಆ 15 (DaijiworldNews/SM): ವಿಧಾನಪರಿಷತ್ಗೆ ಮೂವರ ಹೆಸರನ್ನು ಕಾಂಗ್ರೆಸ್ ಅಂತಿಮಗೊಳಿಸಿದ್ದು, ತೀವ್ರ ವಿರೋಧದ ನಡುವೆಯೂ ರಾಜ್ಯಪಾಲರಿಗೆ ನಾಮನಿರ್ದೇಶನ ಹೆಸರುಗಳ ಪಟ್ಟಿ ರವಾನಿಸಲಾಗಿದೆ.
ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇನ್ನು ಕಾಂಗ್ರೆಸ್ ಪಕ್ಷದ ಕೆಲವು ನಾಯಕರ ವಿರೋಧದ ನಡುವೆಯೂ ಎಂಆರ್ ಸೀತಾರಾಮ್ ಹಾಗೂ ನಿವೃತ್ತ ಇಡಿ ಅಧಿಕಾರಿ ಸುಧಾಮ್ ದಾಸ್ ಹೆಸರನ್ನೂ ನಾಮನಿರ್ದೇಶನ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರಿಗೆ ರವಾನಿಸಿದ್ದಾರೆ.
ಕಲಾವಿದರ ಕೋಟಾದಡಿ ಉಮಾಶ್ರೀ ಅವರಿಗೆ ಸ್ಥಾನ ನೀಡಿದರೆ, ಶಿಕ್ಷಣ ಕ್ಷೇತ್ರದ ಕೋಟಾದಡಿ ಎಂ.ಆರ್.ಸೀತಾರಾಮ್ ಹಾಗೂ ಸಮಾಜಸೇವೆ ಹೆಸರಲ್ಲಿ ನಿವೃತ್ತ ಇಡಿ ಅಧಿಕಾರಿ ಸುಧಾಮ್ ದಾಸ್ ಅವರಿಗೆ ಸ್ಥಾನ ನೀಡಲಾಗಿದೆ. ನಾಮನಿರ್ದೇಶನ ಕುರಿತು ಸಿದ್ದರಾಮಯ್ಯ ಅವರು ನಿನ್ನೆ ರಾಜ್ಯಪಾಲ ಥಾವರ್ ಚಂದ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.
ಸೀತಾರಾಮ್ ಮತ್ತು ಸುಧಾಮ್ ದಾಸ್ ಆಯ್ಕೆಗೆ ವಿರೋಧ ವ್ಯಕ್ತವಾಗಿದ್ದರಿಂದ ಆಕಾಂಕ್ಷಿಗಳನ್ನು ಸಂಪರ್ಕಿಸಿ ಸಮಾಧಾನ ಪಡಿಸಲು ನಾಯಕರು ಪ್ರಯತ್ನಿಸಿದ್ದಾರೆ. ಇನ್ನೊಂದೆಡೆ, ಸೀತಾರಾಮ್, ಸುಧಾಮ್ ದಾಸ್ ನಾಮನಿರ್ದೇಶನ ವಿರೋಧಿಸಿ ರಾಜ್ಯಲಾರಿಗೆ ದೂರು ನೀಡಲಾಗಿದೆ. ಹೀಗಾಗಿ ರಾಜ್ಯಪಾಲರು ಸರ್ಕಾರದಿಂದ ಸ್ಪಷ್ಟನೆ ಕೋರಿದ್ದಾರೆ.