ಶೃಂಗೇರಿ, ಎ09(SS): ಪಾಕ್ ಮೇಲೆ ದಾಳಿ ನಡೆಸಿದ ನಂತರ ವಿಶ್ವಕ್ಕೆ ಭಾರತದ ಶಕ್ತಿ ಏನು ಎಂಬುವುದು ಗೊತ್ತಾಗಿದೆ ಎಂದು ಉಡುಪಿ - ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಆಪತ್ತು ಒದಗಿದಾಗ ಪಾಕಿಸ್ತಾನದ ಗಡಿಯೊಳಕ್ಕೆ ತೆರಳಿದ ಸೇನೆ, ಉಗ್ರಗಾಮಿಗಳನ್ನು ಸೆದೆಬಡಿಯಲು ಯಶಸ್ವಿಯಾಯಿತು. ಇದು ವಿಶ್ವಕ್ಕೆ ಭಾರತದ ಶಕ್ತಿ ತೋರಿಸಿದಂತಾಗಿದೆ ಎಂದು ಹೇಳಿದರು.
ಕಳೆದ ಐದು ವರ್ಷದಲ್ಲಿ ವಿಶ್ವದಲ್ಲಿ ಭಾರತವನ್ನು ಗುರುತಿಸುವಂತೆ ಮಾಡಿದ ಕೀರ್ತಿ ನರೇಂದ್ರ ಮೋದಿಯವರದ್ದಾಗಿದ್ದು, ಮತ್ತೊಮ್ಮೆ ಬಿಜೆಪಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಬರಬೇಕಿದೆ. ಅದಕ್ಕೆ ನಾವೆಲ್ಲರೂ ಸೇರಿ ಮೋದಿಯನ್ನು ಗೆಲ್ಲಿಸಬೇಕಿದೆ ಎಂದು ಹೇಳಿದರು.
ಮೋದಿ ಸರ್ಕಾರ ವಾರ್ಷಿಕ ಐದು ಲಕ್ಷ ರೂ.ವರೆಗಿನ ಆದಾಯ ಹೊಂದಿದವರಿಗೆ ಯಾವುದೇ ತೆರಿಗೆ ವಿದಿಸಿಲ್ಲ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸ್ವಉದ್ಯೋಗಕ್ಕೆ ಒತ್ತು ನೀಡಲಾಗಿದೆ. ಫಸಲ್ ಬೀಮಾ ಯೋಜನೆಯಡಿ ರೈತರಿಗೆ ನಷ್ಟ ಉಂಟಾದಾಗ ವಿಮಾ ಸೌಲಭ್ಯ ನೀಡಲಾಗಿದೆ. ಈ ಬಾರಿ ಮತ್ತೆ ಎನ್ಡಿಎ ಅಧಿಕಾರ ಪಡೆಯಲಿದ್ದು, ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ಉಜ್ವಲ ಯೋಜನೆಯಡಿ ಉಚಿತವಾಗಿ ಅನಿಲ ಸಂಪರ್ಕ, ದೀನ್ದಯಾಳ್ ವಿದ್ಯುದೀಕರಣ ಯೋಜನೆಯಲ್ಲಿ ಸಾವಿರಾರು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ, ರೈತರಿಗೆ ವಾರ್ಷಿಕ 6 ಸಾವಿರ ರೂ. ಸಹಾಯಧನ ನೀಡುವುದರ ಮೂಲಕ ರೈತರಿಗೆ ನೆರವು ನೀಡಲಾಗುತ್ತಿದೆ. ಬಡವರ ಆರೋಗ್ಯ ರಕ್ಷ ಣೆಯಲ್ಲಿ ವಿಶೇಷ ಕಾಳಜಿ ಹೊಂದಿರುವ ಸರಕಾರ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತಂದು ಐದು ಲಕ್ಷ ರೂ.ವರೆಗಿನ ಲಾಭ ಪಡೆಯಬಹುದಾಗಿದೆ ಎಂದು ತಿಳಿಸಿದರು.