ಚಿಕ್ಕಮಗಳೂರು, ಆ 16 (DaijiworldNews/SM) : ಇತಿಹಾಸ ಪ್ರಸಿದ್ಧ ದೇವರಮನೆಗುಡ್ಡ ಪ್ರವಾಸಿ ತಾಣದ ಬಳಿ ಯುವಕರ ಗುಂಪೊಂದು ಸಾರ್ವಜನಿಕ ಸ್ಥಳದಲ್ಲೇ ಮದ್ಯ ಸೇವಿಸುತ್ತಾ ಮೋಜು ಮಸ್ತಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಕೆಲ ದಿನಗಳ ಹಿಂದೆಯಷ್ಟೇ ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರು ರಸ್ತೆಯಲ್ಲೇ ಕುಣಿದು ಮೋಜು ಮಸ್ತಿ ಮಾಡಿದ ಪ್ರಕರಣ ಬೆನ್ನಲ್ಲೇ ಇ ಐತಿಹಾಸಿಕ ಕಾಲಭೈರವೇಶ್ವರ ಸ್ವಾಮಿ ದೇಗುಲದ ಬಳಿಯೇ ಪ್ರವಾಸಿಗರು ಮದ್ಯ ಸೇವಿಸಿ ನೃತ್ಯ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣವಾದ ದೇವರಮನೆಗುಡ್ಡಗೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಕುಟುಂಬ ಸಮೇತ ಭೇಟಿ ನೀಡುವ ಸುಂದರ ಸೊಬಗಿನ ಪ್ರಕೃತಿ ತಾಣ ಇದಾಗಿದ್ದು ಕೆಲವೊಂದು ಪ್ರವಾಸಿಗರ ವರ್ತನೆಯಿಂದಾಗಿ ಇಲ್ಲಿಗೆ ಬರುವ ಇತರ ಪ್ರವಾಸಿಗರಿಗೆ ಇರುಸು ಮುರಿಸು ಆದಂತಾಗಿದೆ. ರಸ್ತೆ ಬದಿ ಮದ್ಯ ಸೇವಿಸಿ, ಬಾಟಲ್ ಕೈಯ್ಯಲ್ಲೇ ಹಿಡಿದು ಪ್ರವಾಸಿ ಯುವಕರ ಗುಂಪು ನೃತ್ಯ ಮಾಡಿದ್ದು ಅಲ್ಲಿದ್ದ ಪ್ರವಾಸಿಗರು ತಮ್ಮ ಮೊಬೈಲ್ ನಲ್ಲಿ ಯುವಕರ ವರ್ತನೆಯನ್ನು ಸೆರೆ ಹಿಡಿದಿದ್ದಾರೆ ಅಲ್ಲದೆ ಪ್ರವಾಸಿ ತಾಣಗಳಲ್ಲಿ ಈ ರೀತಿ ದುರ್ವರ್ತನೆ ತೋರಿದ ಪ್ರವಾಸಿಗರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ಕೇಂದ್ರವೂ ಬಳಿಯಲ್ಲೇ ಇರುವುದರಿಂದ ಇಂತಹ ದುರ್ವರ್ತನೆಗಳಿಗೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಕೂಡಾ ಆಗ್ರಹ ವ್ಯಕ್ತಪಡಿಸಿದ್ದಾರೆ.