ಬೆಂಗಳೂರು, ಆ 17(DaijiworldNews/MS): “ಇಡೀ ದೇಶದಲ್ಲಿಯೇ ಕರ್ನಾಟಕ ರಾಜ್ಯ ಹೂಡಿಕೆಗೆ ಉತ್ತಮ ರಾಜ್ಯ. ಬೆಂಗಳೂರು ದೇಶದ ಇತರೇ ನಗರಗಳಿಗೆ ಮಾದರಿಯಾಗಿದೆ" ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ.ಶಿವಕುಮಾರ್ ತಿಳಿಸಿದರು.
“70 ರ ದಶಕದಿಂದಲೇ ಕರ್ನಾಟಕದಲ್ಲಿ ಉತ್ತಮ ಮಾನವ ಸಂಪನ್ಮೂಲ, ತಾಂತ್ರಿಕ ಶಿಕ್ಷಣ, ನೀರಾವರಿ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳಿಂದ ಇಡೀ ದೇಶಕ್ಕೆ ಮಾದರಿಯಾಗಿದೆ. ಕರ್ನಾಟಕವು ಉದ್ಯಮ ಸ್ಥಾಪನೆಗೆ ಸೂಕ್ತ ಸ್ಥಳ, ಇದರಿಂದ ಉದ್ಯಮಗಳಿಗೂ ಲಾಭ, ಸರ್ಕಾರಕ್ಕೂ ಲಾಭವಾಗಲಿದೆ. ಕರ್ನಾಟಕದ ಅಭಿವೃದ್ಧಿಗಾಗಿ ಎಲ್ಲರನ್ನು ಒಟ್ಟುಗೂಡಿಸಿ ಮುಂದೆ ಸಾಗುತ್ತಿದ್ದೇವೆ. ಪಕ್ಷಾತೀತವಾಗಿ ಮುಂದುವರಿದು ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿಸುತ್ತೇವೆ. ಇಡೀ ದೇಶದಲ್ಲೇ ಐಟಿ ರಫ್ತಿನಲ್ಲಿ ಮೊದಲ ಸ್ಥಾನ, ಕೈಗಾರಿಕಾ ಬೆಳವಣಿಗೆ, ಜಿಎಸ್ಟಿ ಪಾವತಿ ಸೇರಿದಂತೆ ಅಭಿವೃದ್ದಿಯಲ್ಲಿ ಮುಂದಿದ್ದೇವೆ.
ರಾಜ್ಯದ ಜನ ಮುಂದಿನ ಐದು ವರ್ಷಗಳ ಕಾಲ ಸುಭದ್ರ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ನಮ್ಮ ಸರ್ಕಾರ ಹೂಡಿಕೆದಾರರಿಗೆ ಉತ್ತೇಜನ, ಸಹಕಾರ ನೀಡಲು ಬದ್ಧವಾಗಿದೆ. ಅಭಿವೃದ್ಧಿ ವಿಚಾರವಾಗಿ ನಮ್ಮ ಸರ್ಕಾರ ಹೊಸ ನೀತಿ ರೂಪಿಸಲಿದೆ. ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದುವ ಸಾಮರ್ಥ್ಯ ಕರ್ನಾಟಕ ರಾಜ್ಯಕ್ಕಿದೆ. ನೀವು ಯಶಸ್ಸು ಸಾಧಿಸಲು ಕರ್ನಾಟಕ ಸರಿಯಾದ ಸ್ಥಳವಾಗಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಶಂಕುಸ್ಥಾಪನೆಗೆ ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಅವರು ಬಂದಿದ್ದರು. ಆಗ ಅವರೊಂದು ಮಾತು ಹೇಳಿದ್ದರು. "ಮುಂದಿನ ದಿನಗಳಲ್ಲಿ ಎಲ್ಲಾ ಜಾಗತಿಕ ನಾಯಕರು ಮೊದಲು ಬೆಂಗಳೂರಿಗೆ ಭೇಟಿ ಕೊಟ್ಟು ಆನಂತರ ಬೇರೆ ಕಡೆ ಹೋಗುತ್ತಾರೆ" ಅವರ ಭವಿಷ್ಯ ನಿಜವಾಗಿದೆ. 250 ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳು ಕರ್ನಾಟಕದಲ್ಲಿ ಇವೆ ಎಂದು ಹೇಳಿದರು.