ಧಾರವಾಡ, ಆ 18(DaijiworldNews/AK): ಅನಾರೋಗ್ಯದಿಂದ ಒಂದೂವರೆ ವರ್ಷದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತ್ತು. ಆದ್ರೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸಿದ ಬಳಿಕ ಮನೆಯವರು ಅಂತ್ಯಕ್ರಿಯೆಗೆಂದು ಸ್ಮಶಾನಕ್ಕೆ ತೆಗೆದುಕೊಂಡು ಹೋದಾಗ ಕೈ ಕಾಲು ಅಲುಗಾಡಿಸಿದ ಘಟನೆ ನವಲಗುಂದ ತಾಲೂಕಿನ ಬಸಾಪೂರ ಗ್ರಾಮದಲ್ಲಿ ನಡೆದಿದೆ.
ಬಸವರಾಜ್ ಎಂಬ ಒಂದೂವರೆ ವರ್ಷದ ಮಗು ಮೃತಪಟ್ಟಿದೆ ಎಂದು ಹುಬ್ಬಳ್ಳಿ ಕಿಮ್ಸ್ ವೈದ್ಯರು ತಿಳಿಸಿದ್ದರು. ಅನಾರೋಗ್ಯದ ಕಾರಣ ಆಗಸ್ಟ್ 13 ರಂದು ಮಗುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕ್ಸಿಜನ್ ತೆಗೆದರೆ ಮಗು ಸಾವನ್ನಪ್ಪಬಹುದು ಎಂದು ವೈದ್ಯರು ಹೇಳಿದ್ದರು.
ಬಳಿಕ ಗುರುವಾರ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದರು. ಈ ಹಿನ್ನೆಲೆ ಮಗುವಿನ ಪೋಷಕರು ಮಗುವನ್ನು ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿದ್ದಾರೆ.
ಅಂತ್ಯಕ್ರಿಯೆ ಮಾಡುವ ಸಂದರ್ಭ ಬಾಯಿಗೆ ನೀರು ಹಾಕಿದ್ದೇ ತಡ ಮಗು ಕೈಕಾಲು ಅಲುಗಾಡಿಸಿದೆ. ತಕ್ಷಣ ಮಗು ಜೀವಂತವಾಗಿದೆ ಎಂದು ಖುಷಿಯಿಂದ ಪೋಷಕರು ಮತ್ತೆ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಮಗುವಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.