ಬೆಂಗಳೂರು, ಆ 18(DaijiworldNews/MS):ಭಾರತದ ಮೊದಲ 3ಡಿ ಮುದ್ರಿತ ಸರ್ಕಾರಿ ಕಟ್ಟಡ ಅಂಚೆ ಕಚೇರಿಯನ್ನು ರೈಲ್ವೇ, ಸಂವಹನ, ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಶುಕ್ರವಾರ ಲೋಕಾರ್ಪಣೆಗೊಳಿಸಿದರು.
ಬೆಂಗಳೂರಿನ ಕೆಂಬ್ರಿಡ್ಜ್ ಲೇಔಟ್ನಲ್ಲಿ ನಿರ್ಮಾಣವಾಗಿರುವ 3ಡಿ ಮುದ್ರಿತ ಅಂಚೆ ಕಚೇರಿಯನ್ನು ಅಶ್ವಿನಿ ವೈಷ್ಣವ್ ಅವರು ಉದ್ಘಾಟಿಸಿದ್ದು, ಬಳಿಕ ವಿಶೇಷ ಅಂಚೆ ಲಕೋಟೆ ಮತ್ತು ಅಂಚೆ ಕಚೇರಿಯ ಮಾದರಿ ಬಿಡುಗಡೆ ಮಾಡಿದರು.
ವರದಿಗಳ ಪ್ರಕಾರ 1,100 ಚದರಡಿ ಅಂಗಳದಲ್ಲಿ ನಿರ್ಮಿಸಲಾಗಿರುವ ಈ ಕಟ್ಟಡಕ್ಕೆ ತೆರಿಗೆ ಸೇರಿ 26 ಲಕ್ಷ ರೂ ವೆಚ್ಚವಾಗಿದೆ. ನೀರು, ಒಳಚರಂಡಿ ಇತ್ಯಾದಿಗಳಿಗೆ ಹೆಚ್ಚುವರಿ 40 ಲಕ್ಷ ರೂ ವೆಚ್ಚವಾಗಿರುವುದು ತಿಳಿದುಬಂದಿದೆ.
3ಡಿ ಪ್ರಿಂಟೆಡ್ ಪೋಸ್ಟ್ ಆಫೀಸ್ ಕಟ್ಟಡ ನಿರ್ಮಾಣ ಕಾರ್ಯಕ್ಕೆ 44 ದಿನ ಮಾತ್ರ ಆಗಿದ್ದು. ಮಾರ್ಚ್ 21ರಂದು ಕಾಮಕಾರಿ ಶುರುವಾಗಿ ಮೇ 3ಕ್ಕೆ ಮುಗಿದಿತ್ತು. ಒಳಚರಂಡಿ ಮತ್ತು ನೀರಿನ ಸಂಪರ್ಕ ಸಂಬಂಧದ ಕಾಮಗಾರಿಗೆ ಎರಡು ತಿಂಗಳು ಸಮಯ ತೆಗೆದುಕೊಂಡಿತ್ತು. ಇನ್ನು ಉದ್ಘಾಟನೆಗೆ ಸಚಿವರ ಲಭ್ಯತೆಗಾಗಿ ಒಂದು ತಿಂಗಳು ಹಿಡಿದಿತ್ತು. ಕಟ್ಟಡ ನಿರ್ಮಾಣಕ್ಕೆ 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿರುವುದರಿಂದ ನಿರ್ಮಾಣ ವೆಚ್ಚ ಶೇ. 30ರಿಂದ 40ರಷ್ಟು ಮಿಗುತ್ತದೆ. ವೆಚ್ಚ ಮಾತ್ರವಲ್ಲ, ಸಮಯವೂ ಸಾಕಷ್ಟು ಉಳಿತಾಯವಾಗುತ್ತದೆ.