ನವದೆಹಲಿ,ಆ 18 (DaijiworldNews/AK): ಚಂದ್ರಯಾನ-3 ಕಾರ್ಯಾಚರಣೆಯ ಕೊನೆ ಹಂತದ ಭಾಗವಾಗಿ ಬಾಹ್ಯಾಕಾಶ ನೌಕೆಯಿಂದ ಲ್ಯಾಂಡರ್ ಮತ್ತು ರೋವರ್ ಬೇರ್ಪಡಿಸುವ ಕಾರ್ಯ ಗುರುವಾರ ಯಶಸ್ವಿಯಾಗಿ ನಡೆದಿತ್ತು. ಅದರ ಬೆನ್ನಲ್ಲೇ ಇಂದು ಮತ್ತೊಂದು ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಲಾಗಿದೆ.ಆಗಸ್ಟ್ 23ರಂದು ಚಂದಿರನ ಅಂಗಳಕ್ಕೆ ಕಾಲಿಡಲಿದೆ ಎಂದು ನಿರೀಕ್ಷಿಸಲಾದ ಭಾರತದ ವಿಕ್ರಂ ಲ್ಯಾಂಡರ್ ಇಂದು ಈ ಐತಿಹಾಸಿಕ ಕ್ಷಣಕ್ಕೂ ಮುನ್ನ ನಡೆಸಲಾಗುವ ಇನ್ನೊಂದು ಮಹತ್ವದ ಮೈಲಿಗಲ್ಲನ್ನು ದಾಟಿದೆ.
ಇಂದು ವಿಕ್ರಂ ಲ್ಯಾಂಡರ್ ತನ್ನ ಮೊದಲ ಡಿಬೂಸ್ಟಿಂಗ್ ಆಪರೇಷನ್ಗೆ ಒಳಗಾಯಿತು. ಈ ಪ್ರಕ್ರಿಯೆಯು ಚಂದ್ರನ ಹತ್ತಿರದ ಕಕ್ಷೆಗೆ ಅದನ್ನು ಸೇರಿಸಲು ಅದನ್ನು ನಿಧಾನಗೊಳಿಸಿದೆ.
ಲ್ಯಾಂಡರ್ ಮೊಡ್ಯೂಲ್ನ ಸ್ಥಿತಿ ಸಹಜವಾಗಿದ್ದು ಹಾಗೂ ಇಂದು ಕೈಗೊಳ್ಳಲಾದ ಮಹತ್ವದ ಹೆಜ್ಜೆ ಯಶಸ್ವಿಯಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಇಂದಿನ ಡಿಬೂಸ್ಟರ್ ಆಪರೇಷನ್ ಲ್ಯಾಂಡರ್ ಮೊಡ್ಯೂಲ್ನ ಕಕ್ಷೆಯನ್ನು 113 ಕಿಮೀ x ಕಿಮೀಗೆ ಕಡಿಮೆಗೊಳಿಸಿದೆ. ಇಂತಹ ಎರಡನೇ ಪ್ರಕ್ರಿಯೆ ಆಗಸ್ಟ್ 20ರಂದು ನಡೆಯಲಿದೆ ಎಂದು ಇಸ್ರೋ ಹೇಳಿದೆ. ಆಗಸ್ಟ್ 23ರಂದು ಚಂದಿರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ಕಾಲಿಟ್ಟರೆ ಈ ಸಾಧನೆ ಮಾಡಿದ ಜಗತ್ತಿನ ನಾಲ್ಕನೇ ರಾಷ್ಟ್ರ ಭಾರತ ಆಗಲಿದೆ.