ಚಿಕ್ಕಮಗಳೂರು, ಆ 19 (DaijiworldNews/AK): ಪಕ್ಷ ಬಿಟ್ಟವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಕೇಂದ್ರ ಕೃಷಿ ಮತ್ತು ರಾಜ್ಯ ರೈತ ಕಲ್ಯಾಣ ಶೋಭಾ ಕರಂದ್ಲಾಜೆ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹೆಚ್ಚಿನ ಸ್ಥಾನ ಗಳಿಸಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕಿದೆ. ಈ ನಿಟ್ಟಿನಲ್ಲಿ ಪಕ್ಷ ತೊರೆದವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಪಕ್ಷವನ್ನು ಸದೃಢ ಮಾಡಬೇಕಾದ ಅಗತ್ಯವಿದೆ ಎಂದರು.
ದೇಶಕ್ಕೆ ಮತ್ತು ವಿಶ್ವಕ್ಕೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಬಯಸುತ್ತಿದೆ. ಭಾರತವನ್ನು ಮತ್ತಷ್ಟು ಗಟ್ಟಿ ಮಾಡಲು ಎಲ್ಲರ ಸಹಕಾರ ಬೇಕು ಎಂದರು.
ಬಿಜೆಪಿ ಸರ್ಕಾರ ರಚನೆ ಮಾಡಲು ಶಾಸಕರು, ಮುಖಂಡರು ಬಿಜೆಪಿ ಸೇರಿದ್ದರು. ಅವರಿಗೆ ಬಿಜೆಪಿ ಅತ್ಯಂತ ಗೌರವದಿಂದ ನಡೆದುಕೊಂಡಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಅವರಿಗೆ ದೊಡ್ಡ ಖಾತೆ ಕೊಡಲಾಗಿತ್ತು. ಅವರನ್ನ ದೊಡ್ಡ-ದೊಡ್ಡ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗಿತ್ತು.ಪಕ್ಷದ ಎಲ್ಲಾ ಚಟುವಟಿಕೆಯಲ್ಲಿ ಅವರನ್ನ ತೊಡಗಿಸಿಕೊಳ್ಳಲಾಗಿತ್ತು ಎಂದರು.
ಮತ್ತೆ ಬಿಜೆಪಿಯನ್ನ ಕಟ್ಟಬೇಕು ಅನ್ನೋದು ನಮ್ಮ ಅಪೇಕ್ಷೆ. ನಮ್ಮ ಪಕ್ಷದ ತತ್ವ-ವಿಚಾರ ಒಪ್ಪಿ ಅವರು ಬಿಜೆಪಿ ಸೇರಿದವರು ಇಲ್ಲೇ ಇರ್ತಾರೆ. ಅಧಿಕಾರಕ್ಕಾಗಿ ಬಂದರು ಅಧಿಕಾರ ಇಲ್ಲದಾಗ ಹೋದರು ಎಂಬ ಕೆಟ್ಟ ಹೆಸರನ್ನ ಯಾರೂ ತೆಗೆದು ಕೊಳ್ಳಲ್ಲ ಅನ್ನೋ ವಿಶ್ವಾಸವಿದೆ ಎಂದರು.