ಮೈಸೂರು, ಏ 09(MSP): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕರ್ನಾಟಕಕ್ಕೆ ಆಗಮಿಸುತ್ತಿದ್ದು ಮೈಸೂರು ಹಾಗೂ ಚಿತ್ರದುರ್ಗಗಳಲ್ಲಿ ಬೃಹತ್ ಸಮಾವೇಶ ನಡೆಯಲಿದೆ.
ಪ್ರಧಾನಿ ಮೋದಿ ಆಗಮನದ ಹಿನ್ನಲೆಯಲ್ಲಿ ಮೈಸೂರು ನಗರದಾದ್ಯಂತ ಭಾರೀ ಭದ್ರತೆ ಏರ್ಪಡಿಸಲಾಗಿದೆ. ಈಗಾಗಲೇ ಕಾರ್ಯಕ್ರಮ ನಡೆಯುವ ಸ್ಥಳವನ್ನು ಎಸ್ಪಿಜಿ ತಂಡ ಸುಪರ್ದಿಗೆ ಪಡೆದಿದ್ದು, ಭದ್ರತೆಗೆ 7 ಐಪಿಎಸ್ ಅಧಿಕಾರಿಗಳು, 22 ಎಸಿಪಿ, 50ಕ್ಕೂ ಹೆಚ್ಚು ಇನ್ಸ್ಪೆಕ್ಟರ್ಗಳು ಸೇರಿದಂತೆ ಒಟ್ಟು 1500 ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಪ್ರತಿ ಹಂತದಲ್ಲೂ ಪ್ರಧಾನಿಯ ವಿಶೇಷ ಭದ್ರತಾ ಪಡೆಯಿಂದ ಪರಿಶೀಲನೆ ನಡೆಸಲಾಗುತ್ತಿದೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಆದರೆ ಇದಕ್ಕಿಂತಲೂ ವಿಶೇಷ ಎಂದರೆ ಪ್ರಚಾರಕ್ಕಾಗಿ ಹಲವಾರು ರೀತಿ ಕಸರತ್ತುಗಳನ್ನು ನಡೆಸುತ್ತಿರುವ ಬಿಜೆಪಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ’ಮೋದಿ ಜತೆ ಸೆಲ್ಪಿ ’ ಎಂಬ ಹೊಸತೊಂದು ತಂತ್ರಕ್ಕೆ ಮೊರೆ ಹೋಗಿದ್ದಾರೆ. ಇದಕ್ಕಾಗಿ ಪ್ರಧಾನಿ ಮೋದಿ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಅವಕಾಶಕ್ಕೆ ಸೆಲ್ಫಿ ಝೋನ್ ರೆಡಿ ಮಾಡಿದ್ದಾರೆ.
ವಿವಿಧ ರೀತಿಯ ಪ್ರಚಾರ ತಂತ್ರವನ್ನು ಬಳಸಿಕೊಳ್ಳುತ್ತಿರುವ ಬಿಜೆಪಿ ಜಾಹೀರಾತಿನ ವಿಚಾರದಲ್ಲಿ ಕಾಂಗ್ರೆಸ್ ಗಿಂತ ಸ್ವಲ್ಪ ಮುಂದಿದೆ. ಇದಕ್ಕೀಗಾ ಸೆಲ್ಪಿ ಗಿಮಿಕ್ ನ ಪ್ರಚಾರ ತಂತ್ರವೂ ಸೇರಿಕೊಂಡಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಶಾಸಕ ಎಸ್.ಎ. ರಾಮದಾಸ್ " ಪ್ರಧಾನ ಮಂತ್ರಿಯೊಂದಿಗೆ ಸೆಲ್ಫಿಗೆ ತೆಗೆದುಕೊಳ್ಳುವುದು ಎಲ್ಲರ ಇಚ್ಚೆ. ಇದಕ್ಕಾಗಿ ಸೆಲ್ಪಿ ಪ್ರಿಯ ಯುವಕರನ್ನು ಸಂತಸಪಡಿಸಲು ಮುಖ್ಯ ವೇದಿಕೆಯ ಸಮೀಪವೇ ಒಂದು ಸೆಲ್ಫಿ ಝೋನ್ ವಲಯವನ್ನು ಸ್ಥಾಪಿಸಲಾಗಿದೆ" ಎಂದಿದ್ದಾರೆ.ಚಿತ್ರದುರ್ಗ ಮತ್ತು ಮೈಸೂರಿನ ಮೋದಿ ಸಮಾವೇಶಕ್ಕೆ ಜನರು ಸಾಗರೋಪಾದಿಯಲ್ಲಿ ಸೇರುವ ನಿರೀಕ್ಷೆ ಇದೆ.