ದಾವಣಗೆರೆ, ಆ 20 (DaijiworldNews/HR): ಅಮೇರಿಕಾದಲ್ಲಿ ದಾವಣಗೆರೆ ಮೂಲದ ದಂಪತಿ ಹಾಗೂ ಮಗುವಿನ ನಿಗೂಢ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪುತ್ರ ಹಾಗೂ ಪತ್ನಿಯನ್ನು ಗುಂಡಿಕ್ಕಿ ಬಳಿಕ ಪತಿಯೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಮೃತ ಯೋಗೇಶ್ ಹೊನ್ನಾಳ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದವರಾಗಿದ್ದು, ಎಂಜಿನಿಯರ್ ಪದವಿ ಪಡೆದಿದ್ದರು. ಪತ್ನಿ ಪ್ರತಿಭಾ ಮೂಲತಃ ಬೆಂಗಳೂರಿನವರಾಗಿದ್ದು, ಕಳೆದ 9 ವರ್ಷದ ಹಿಂದೆ ವಿವಾಹವಾಗಿದ್ದು, ದಂಪತಿಗೆ ಯಶ್ ಎಂಬ 6 ವರ್ಷದ ಮಗ ಕೂಡಾ ಇದ್ದ.
ಇನ್ನು ಕಳೆದ ಎರಡು ದಿನಗಳಿಂದ ದಂಪತಿ ಯಾರೂ ಮನೆಯಿಂದ ಹೊರಗೆ ಬಾರದೇ ಇರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮನೆ ಬಳಿ ಬಂದು ಗಮನಿಸಿದಾಗ ಪೊಲೀಸರಿಗೆ ಮೂವರು ಮೃತಪಟ್ಟಿರುವುದು ಗೊತ್ತಾಗಿದೆ. ತಕ್ಷಣ ಬೆಂಗಳೂರಿನಲ್ಲಿ ಇದ್ದ ಯೋಗೇಶ್ ಸಹೋದರನಿಗೆ ಫೋನ್ ಮೂಲಕ ವಿಷಯ ಮುಟ್ಟಿಸಿದ್ದಾರೆ.
ಇದೀಗ ಪೊಲೀಸರು ಪ್ರಾಥಮಿಕ ಹೇಳಿಕೆ ಬಿಡುಗಡೆ ಮಾಡಿದ್ದು, ಪತಿ ಮತ್ತು ಪತ್ನಿಯ ನಡುವಿನ ಕಲಹವೇ ಘಟನೆಗೆ ಕಾರಣ ಎನ್ನಲಾಗಿದೆ.
ಪುತ್ರ ಯಶ್ ಹಾಗೂ ಪತ್ನಿ ಪ್ರತಿಭಾಳ ಹತ್ಯೆ ನಡೆಸಿ ನಂತರ ಪತಿ ಯೋಗೇಶ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಪೂರ್ಣ ಮಾಹಿತಿ ಬಹಿರಂಗವಾಗಲಿದೆ.