ಚಿಕ್ಕಬಳ್ಳಾಪುರ, ಆ 22(DaijiworldNews/AK): ಬಿಜೆಪಿ ಸಂಸದ ಬಿಎನ್ ಬಚ್ಚೇಗೌಡ ಮಂಗಳವಾರ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಬಚ್ಚೇಗೌಡ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಕಾರ ಪಕ್ಷದಲ್ಲಿ ಎಪ್ಪತ್ತು ವರ್ಷ ವಯಸ್ಸಿಗೆ ನಿವೃತ್ತಿಯಾಗಬೇಕು. ಈಗ ನನಗೆ ಎಂಬತ್ತೊಂದು ವರ್ಷ ವಯಸ್ಸಾಗಿದೆ. ಅರ್ಥಪೂರ್ಣ ಸಮಾರಂಭವನ್ನೂ ಆಚರಣೆ ಮಾಡಿಕೊಂಡಿದ್ದೇವೆ. ನನಗೆ ಪಕ್ಷದಲ್ಲಿ ಟಿಕೆಟ್ ಕೊಡುವುದಿಲ್ಲ ಅಂತ ಪ್ರಧಾನಿ ಮೋದಿ ಹೇಳಿಬಿಟ್ಟಿದ್ದಾರೆ. ಹೀಗಾಗಿ ನಿವೃತ್ತಿಯಾಗುತ್ತಿದ್ದೇನೆ ಎಂದು ಹೇಳಿದ್ದಾರೆ.
ಚುನಾವಣಾ ರಾಜಕೀಯದಲ್ಲಿ ಇರದಿದ್ದರೂ ರಾಜಕಾರಣದಲ್ಲಿ ಸಕ್ರಿಯವಾಗಿ ಕೆಲಸ ಮಾಡಿಕೊಂಡು ಇರುತ್ತೇನೆ ಎಂದು ಅವರು ಹೇಳಿದ್ದಾರೆ.
ಬಿಎನ್ ಬಚ್ಚೇಗೌಡ ಅವರು ಜನತಾ ಪಕ್ಷದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಬಳಿಕ ಬಿಜೆಪಿ ಸೇರಿದ ಅವರು 2008 ರಿಂದ ಬಿಜೆಪಿ ಸದಸ್ಯರಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರು ಐದು ಬಾರಿ ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
2013 ರಲ್ಲಿ ಜಗದೀಶ್ ಶೆಟ್ಟರ್ ಅವರ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಅದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೊಸಕೋಟೆಯಿಂದ ಸೋತರು. ಅವರು 2014 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚಿಕ್ಕಬಳ್ಳಾಪುರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತರು. 2019 ರಲ್ಲಿ ಮರಳಿ ಸ್ಪರ್ಧಿಸಿ ಗೆಲುವು ಸಾಧಿಸಿದರು.
ಇದೀಗ 2023ರಲ್ಲಿ ಬಚ್ಚೇಗೌಡ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಘೋಷಿಸಿದ್ದಾರೆ.