ಬೆಂಗಳೂರು,ಆ 23 (DaijiworldNews/AK): ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ನೌಕೆ ಚಂದ್ರನ ಅಂಗಳಕ್ಕೆ ಕಾಲಿಡಲು ಕ್ಷಣಗಣನೆ ಆರಂಭವಾಗಿದೆ. ಇನ್ನು ಕೆಲವೇ ಗಂಟೆ ಬಾಕಿ ಇದ್ದು, ಚಂದ್ರಯಾನ-3 ಯೋಜನೆ ಯಶಸ್ವಿಯಾಗಿ ಪರಿಪೂರ್ಣಗೊಳ್ಳಲಿ ಎಂದು ದೇಶಾದ್ಯಂತ ಪ್ರತಿಯೊಬ್ಬ ಭಾರತೀಯರೂ ಶುಭ ಹಾರೈಸುತ್ತಿದ್ದಾರೆ.
ದೇಶದ ಮೂಲೆ ಮೂಲೆಯಲ್ಲಿ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಾರ್ಥನೆ, ಪೂಜೆ ಪುನಸ್ಕಾರಗಳ ಮೂಲಕವೂ ಚಂದ್ರಯಾನ-3ರ ಯಶಸ್ಸಿಗೆ ಪ್ರಾರ್ಥಿಸಲಾಗುತ್ತಿದ್ದು, ಮಂದಿರ, ಮಸೀದಿ, ಚರ್ಚ್ ಎನ್ನದೆ ಸರ್ವಧರ್ಮೀಯರೂ ಶುಭ ಹಾರೈಸುತ್ತಿದ್ದಾರೆ.
ಇತ್ತ ವಿದೇಶದಲ್ಲಿರುವ ಭಾರತೀಯರು ಕೂಡ ಚಂದ್ರಯಾನದ ಯಶಸ್ಸಿಗೆ ಪ್ರಾರ್ಥಿಸುತ್ತಿದ್ದಾರೆ. ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಕ್ಷೇತ್ರ ಸಿಗಂದರು ಚೌಡೇಶ್ವರಿ ದೇವಸ್ಥಾನದಲ್ಲಿ ಕೂಡ ಚಂದ್ರಯಾನದ ಯಶಸ್ಸಿಗಾಗಿ ಬೆಳಿಗ್ಗೆಯಿಂದ ದುರ್ಗಾ ಸಪ್ತಶತಿ ಪಾರಾಯಣ, ಚಂಡಿಕಾ ಹೋಮ ಹಾಗೂ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ
ಚಂದ್ರಯಾನ-3 ತಂಡದ ಭಾಗವಾಗಿರುವ ಇಸ್ರೋ ವಿಜ್ಞಾನಿ ಸುಧಾಂಶು ಕುಮಾರ್ ಅವರ ಪೋಷಕರು ಬಿಹಾರದ ಗಯಾದಲ್ಲಿರುವ ಮನೆಯಲ್ಲಿ ಚಂದ್ರಯಾನ-೩ ಯಶಸ್ವಿ ಲ್ಯಾಂಡಿಂಗ್ಗಾಗಿ ಪ್ರಾರ್ಥನೆ ಸಲ್ಲಿಸಿದರು.
ಇನ್ನು ಚಂದ್ರಯಾನ 3 ಯಶಸ್ವಿಗಾಗಿ ಒಂದು ಗಂಟೆಗಳ ಕಾಲ ಸುದೀರ್ಘ ಪೂಜೆಯನ್ನು ಬೆಂಗಳೂರು ನಗರದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ನೇತೃತ್ವದಲ್ಲಿ ಪೂಜೆ ಕೈಂಕರ್ಯ ಕಾರ್ಯ ನಡೆಯಲಿದ್ದು, , ಒಂದು ಗಂಟೆಗಳ ಕಾಲ ನವಗ್ರಹಗಳ ಪೂಜೆ ಹಾಗೂ ಚಂದ್ರ ಹೋಮ ನಡೆಯತ್ತಿದೆ.