ದಾವಣಗೆರೆ, ಆ 23 (DaijiworldNews/SM): 2016 ರಿಂದ ಇಲ್ಲಿಯವರೆಗೆ ಸುಮಾರು 16 ಸಾವಿರ ಸಿಬ್ಬಂದಿ ನಿವೃತ್ತರಾಗಿದ್ದಾರೆ. ಆದರೆ, ಅವರ ಸ್ಥಾನಗಳಿಗೆ ಬದಲಿ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಇದರಿಂದ ಹೆಚ್ಚುವರಿ ಬಸ್ಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ. ಹಂತಹಂತವಾಗಿ ಖಾಲಿ ಇರುವ ನಾಲ್ಕು ನಿಗಮಗಳ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ದಾವಣಗೆರೆಯಲ್ಲಿ ತಿಳಿಸಿದರು.
ನಗರದ ಪಿ.ಬಿ. ರಸ್ತೆಯಲ್ಲಿ ನಿರ್ಮಾಣಗುತ್ತಿರುವ ಬಸ್ ನಿಲ್ದಾಣ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಬಳಿಕ ಸಚಿವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ 4,000 ಬಸ್ಗಳ ಖರೀದಿಗೆ ಟೆಂಡರ್ ಕರೆಯಲಾಗಿತ್ತು. ಇದರೊಂದಿಗೆ ಈಗ 1,000 ಬಸ್ಗಳನ್ನು ಖರೀದಿ ಸೇರಿ ಒಟ್ಟು 5 ಸಾವಿರ ಬಸ್ಗಳನ್ನು ಖರೀದಿಸಲಾಗುತ್ತಿದೆ. ಇದರಲ್ಲಿ ಎಲೆಕ್ಟ್ರಿಕ್ ಬಸ್ಗಳು ಸೇರಿಕೊಂಡಿವೆ. ನಗರ, ಗ್ರಾಮೀಣ ಸಾರಿಗೆಗೆ ಎಲೆಕ್ಟ್ರಿಕ್ ಬಸ್ಗಳನ್ನು ಓಡಿಸಲು ಪ್ರಯತ್ನಿಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.
ಸರ್ಕಾರ ಶಕ್ತಿ ಯೋಜನೆ ಸೇರಿದಂತೆ ಬಸ್ಗಳ ಖರೀದಿಗೆ 1,700 ಕೋಟಿ ರೂಪಾಯಿ ನೀಡಿದ್ದು, ಶಕ್ತಿ ಯೋಜನೆಯ ಎಲ್ಲಾ ಅಂಕಿ ಅಂಶಗಳನ್ನು ನೀಡಿದ ನಂತರ ನಿಗಮಗಳಿಗೆ ಅನುದಾನ ಬಿಡುಗಡೆಯಾಗಲಿದೆ ಎಂದರು.