ತುಮಕೂರು, ಆ 24 (DaijiworldNews/MS): ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿಯಿರುವ 13 ಚಾಲಕ/ನಿರ್ವಾಹಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರದಿಂದ ಅನುಮತಿ ದೊರೆತಿದ್ದು, ಆರ್ಥಿಕ ಇಲಾಖೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿ, ಆರ್ಥಿಕ ಇಲಾಖೆಯಿಂದ ಅನುಮತಿ ಲಭಿಸಿದ ಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಇದರಿಂದ ಸಾರಿಗೆ ಸಂಸ್ಥೆಗಳಲ್ಲಿ ಹಲವು ವರ್ಗಗಳಿಂದ ಖಾಲಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಈ ಹಿಂದೆ 2016ರಲ್ಲಿ ಸಾರಿಗೆ ಸಚಿವರಾಗಿದ್ದಾಗ ಚಾಲಕ/ನಿರ್ವಾಹಕರನ್ನು ನೇಮಕಾತಿ ಮಾಡಲಾಗಿತ್ತು. ನಂತರ 7 ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಈ ನಿಟ್ಟಿನಲ್ಲಿ ಹೊಸ ನೇಮಕಾತಿ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ. ಅಲ್ಲದೇ 5000 ಹೊಸ ಬಸ್ಸುಗಳ ಖರೀದಿಗೆ ಮುಖ್ಯಮಂತ್ರಿಗಳು 500 ಕೋಟಿ ರು.ಗಳ ಅನುದಾನ ಒದಗಿಸಿದ್ದಾರೆ ಎಂದು ಹೇಳಿದ್ದಾರೆ.