ಕಲಬುರಗಿ, ಆ 25 (DaijiworldNews/MS): ಮನೆ ಎದುರಿದ್ದ ತೆರೆದ ಚರಂಡಿಗೆ ಎರಡು ವರ್ಷದ ಪುಟ್ಟ ಮಗುವೊಂದು ಬಿದ್ದು ಪ್ರಾಣ ಕಳೆದುಕೊಂಡ ದಾರುಣ ಘಟನೆ ಕಲಬುರಗಿ ನಗರದ ಮುಜಾಹಿರ್ ಬಡಾವಣೆಯಲ್ಲಿ ನಡೆದಿದೆ.
ಸೋನಿಯಾ ಗಾಂಧಿ ಆಶ್ರಯ ಕಾಲನಿಯ ಮಹ್ಮದ್ ಬುರ್ಹಾನುದ್ದೀನ್ ಎಂಬುವರ ಪುತ್ರ ಅಬ್ದುಲ್ ರಹಿಮಾನ್ (2) ಮೃತ ಮಗು.
ಗುರುವಾರ ಮಧ್ಯಾಹ್ನ ಮಗು ಆಟ ಆಡಿಕೊಂಡು ಮನೆಯ ಮುಂಭಾಗದಲ್ಲಿರುವ ಒಳಚರಂಡಿ ಕಡೆಗೆ ಹೋಗಿದೆ. ಈ ವೇಳೆ ತಿಳಿಯದೇ ಚರಂಡಿಯಲ್ಲಿ ಬಿದ್ದಿದೆ. ಕೊಳಚೆ ನೀರಿಗೆ ಬಿದ್ದ ಮಗು ಉಸಿರುಗಟ್ಟಿ ಕೊನೆಯುಸಿರಳೆದಿದೆ ಎಂದು ಪೊಲೀಸರು ಮೂಲಗಳು ತಿಳಿಸಿವೆ.
ಮಹಾನಗರ ಪಾಲಿಕೆಯು ಒಳಚರಂಡಿ ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ಮಾಡಿದ್ದರಿಂದಲೇ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಮತ್ತು ಪಾಲಿಕೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.