ಪುಣೆ, ಆ 26 (DaijiworldNews/AK): ದೇಶದ ಶೇಕಡ 31ರಷ್ಟು ಭೂಭಾಗ ಅನಾವೃಷ್ಟಿಯ ಭೀತಿ ಎದುರಿಸುತ್ತಿದ್ದು, ಭಾರೀ ವೈಪರೀತ್ಯ ಸ್ಥಿತಿ ಈ ಭಾಗದಲ್ಲಿ ಬಂದಿದೆ ಎಂದು ಹವಾಮಾನ ಇಲಾಖೆ ಬಹಿರಂಗಪಡಿಸಿದೆ.
ಜುಲೈ 27 ರಿಂದ ಆಗಸ್ಟ್ 23ರ ಅವಧಿಯ ಸ್ಟಾಂಡರ್ಡೈಸ್ಡ್ ಪ್ರಿಸಿಪಿಟೇಶನ್ ಇಂಡೆಕ್ಸ್ (ಎಸ್ಪಿಐ) ಅಂಕಿ ಅಂಶಗಳಿಂದ ಇದು ದೃಢಪಟ್ಟಿದೆ. ಕೃಷಿ, ಬೆಳೆಯ ಇಳುವರಿ ಮತ್ತು ಮಣ್ಣಿನ ತೇವಾಂಶ ಮೇಲೆ ಮಹತ್ವದ ಪರಿಣಾಮ ಬೀರಲಿದೆ.
ಮುಂದಿನ ಎರಡು ವಾರಗಳಲ್ಲಿ ಮಳೆ ಅಭಾವ ಸ್ಥಿತಿ ಮುಂದುವರಿದರೆ, ಒತ್ತಡ ಮತ್ತಷ್ಟು ಹೆಚ್ಚಲಿದೆ ಎಂದು ಐಎಂಡಿ ವಿಜ್ಞಾನಿ ರಜೀಬ್ ಚಟ್ಟೋಪಾಧ್ಯಾಯ ಹೇಳಿದ್ದಾರೆ.
ಕಳೆದ ಒಂದು ತಿಂಗಳಿಂದ ಮಂಗಾರು ದುರ್ಬಲವಾಗಿದ್ದು, ಆಗಸ್ಟ್ ತಿಂಗಳಲ್ಲಿ ಇದುವರೆಗಿನ ಕನಿಷ್ಠ ಮಳೆ ದಾಖಲಾಗಿದೆ. ಭಾರತದ ಭೂಭಾಗದ ಶೇಕಡ 31ರಷ್ಟು ಪ್ರದೇಶಗಳಲ್ಲಿ ಶೇಕಡ 9ರಷ್ಟು ಮಳೆ ಅಭಾವ ಇದ್ದು, ಉಳಿದ ಶೇಕಡ 4ರಷ್ಟು ಪ್ರದೇಶಗಳಲ್ಲಿ ತೀವ್ರ ಶುಷ್ಕ ವಾತಾವರಣ ಇದೆ.
ವೈಪರೀತ್ಯದ ಪರಿಸ್ಥಿತಿ ಇರುವ ಪ್ರದೇಶಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳು, ಮಹಾರಾಷ್ಟ್ರದ ಜಿಲ್ಲೆಗಳು, ಗುಜರಾತ್ ಹಾಗೂ ಪೂರ್ವಭಾರತ ಸೇರಿದೆ. ಈ ಭಾಗಗಳಲ್ಲಿ ಪರಿಸ್ಥಿತಿ ತೀರಾ ಕಠಿಣ ಎನ್ನುವುದನ್ನು ಎಸ್ಪಿಐ ಅಂಕಿ ಅಂಶಗಳು ದೃಢಪಡಿಸಿದ್ದು, ಸಾಮಾನ್ಯದಿಂದ ಭಾರೀ ಶುಷ್ಕ ವಾತಾವರಣ ಇದೆ ಎಂದು ಸ್ಪಷ್ಟಪಡಿಸಿದೆ.