ಬೆಂಗಳೂರು, ಆ 26 (DaijiworldNews/MS): ಚಂದ್ರಯಾನ-3 ಮಿಷನ್ ಯಶಸ್ವಿಯಾಗಿದ್ದು ಇಡೀ ಮನುಕುಲಕ್ಕೆ ಮಹತ್ವಪೂರ್ಣವಾದದ್ದು, ಆಗಸ್ಟ್ 23ರಂದು ಚಂದ್ರಯಾನ ಯಶಸ್ವಿಯಾದ ದಿನವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಚಂದ್ರಯಾನ-3 ಯಶಸ್ಸಿನ ಕುರಿತು ಇಸ್ರೋ ವಿಜ್ಞಾನಿಗಳ ಅಭಿನಂದಿಸಲು ಬೆಂಗಳೂರಿನ ಇಸ್ರೋ ಕಚೇರಿಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಅಭಿನಂದಿಸಿದ ಬಳಿಕ ಮಾತನಾಡಿದ ಅವರು, ಚಂದ್ರನ ಮೇಲೆ ಪ್ರಜ್ಞಾನ್ ಪರಾಕ್ರಮ ಕಂಡು ಖುಷಿಯಾಗಿದೆ. ಇಡೀ ವಿಶ್ವವೇ ಭಾರತದ ವಿಜ್ಞಾನ, ತಂತ್ರಜ್ಞಾನವನ್ನು ಒಪ್ಪಿಕೊಂಡಿದೆ ಎಂದ ಅವರು ಚಂದ್ರಯಾನ 2 ವೈಫಲ್ಯದ ಸ್ಥಳಕ್ಕೆ ತಿರಂಗಾ ಎಂದೂ, ಚಂದ್ರಯಾನ 3 ಸಾಫಲ್ಯದ ಸ್ಥಳಕ್ಕೆ ಶಿವ ಶಕ್ತಿ ಸ್ಥಳ ಎಂದೂ ನಾಮಕರಣ ಮಾಡಿದ್ದಾರೆ.
ಭಾರತ ಚಂದ್ರಯಾನ ಹಾಗೂ ಮಂಗಳಯಾನದಲ್ಲಿ ಯಶಸ್ಸನ್ನು ಗಳಿಸಿ ಮಾನವಸಹಿತ ಗಗನಯಾನಕ್ಕೆ ಸಿದ್ಧತೆ ನಡೆಸುತ್ತಿದೆ. ಈ ಮೂಲಕ ಭಾರತೀಯ ನೆಲ, ಇಲ್ಲಿನ ಜನರ ಮನ ಹಾಗೂ ಚಂದ್ರನಲ್ಲೂ ತಿರಂಗಾ ಮನೆ ಮಾಡಿದೆ ಎಂದು ಅವರು ಹೇಳಿದರು.