ರಾಯ್ಗಂಜ್, ಎ09(AZM):ಪ್ರಧಾನಿ ನರೇಂದ್ರ ಮೋದಿ ಅವರ ಚಟುವಟಿಕೆಗಳನ್ನು ಅಡಾಲ್ಪ್ ಹಿಟ್ಲರ್ ನೋಡಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ರಾಯ್ ಗಂಜ್ ಅಲ್ಲಿ ನಡೆದ ಚುನಾವಣಾ ಪ್ರಚಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಹಿಂಸಾಚಾರ ಮತ್ತು ಗಲಭೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಏರಿದ್ದಾರೆ ಎಂದು ಇದೇ ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿಗೆ ಬಲವಾದ ಪೈಪೋಟಿ ನೀಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಇದು ಬಿಜೆಪಿ ಬೆಳೆಯಲು ಕಾರಣವಾಗಿದೆ ಎಂದರು. ಮೋದಿ ಅವರು ಗಲಭೆ ಹಾಗೂ ಹತ್ಯೆ ನಡೆಸುವ ಮೂಲಕ ಅಧಿಕಾರ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ಗೆ ಸ್ವತಂತ್ರವಾಗಿ ಸರಕಾರ ರಚಿಸಲು ಸಾಧ್ಯವಾಗದು ಎಂದು ಪ್ರತಿಪಾದಿಸಿದ ಅವರು, ಕೇಂದ್ರದಲ್ಲಿ ಸರಕಾರ ರಚಿಸಲು ಬಯಸುವುದಾದರೆ, ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಇತರ ಪಕ್ಷಗಳ ನೆರವು ಕೋರಬೇಕು ಎಂದರು.
ಪ್ರತಿ ರಾಜ್ಯದಲ್ಲಿ ಮೈತ್ರಿ ಮಾಡುವ ಮೂಲಕ ಮೋದಿ ಅವರನ್ನು ಅಧಿಕಾರದಿಂದ ಹೊರಗಿಡಬಹುದು. ಒಂದು ಬಾರಿ ಮೋದಿ ಅವರನ್ನು ಅಧಿಕಾರದಿಂದ ಹೊರ ಹಾಕಿದರೆ, ನಾವೆಲ್ಲರೂ ನೂತನ ಭಾರತ ನಿರ್ಮಾಣ ಮಾಡಲು ಕಾರ್ಯ ನಿರ್ವಹಿಸಬಹುದು ಎಂದು ಮಮತಾ ಬ್ಯಾನರ್ಜಿ ಹೇಳಿದರು.-