ಬೆಂಗಳೂರು, ಆ 28 (DaijiworldNews/Ak): ಜೀವನ ಸಂಗಾತಿಯನ್ನು ಹುಡುಕಲು ಡೇಟಿಂಗ್ ಆ್ಯಪ್ಗಳನ್ನು ಬಳಸುವವರು ಇನ್ನು ಮುಂದೆ ಹುಷಾರಾಗಿರಿ. ತಮ್ಮ ಬಾಳ ಸಂಗಾತಿಯನ್ನು ಹುಡುಕಲು ಡೇಟಿಂಗ್ ಆ್ಯಪ್ ಮೊರೆ ಹೋಗುವ ಯುವಕರಿಗೆ ಮೋಸ ಮಾಡಿ ಸುಲಿಗೆ ಮಾಡುವವರು ಇದ್ದಾರೆ. ಇದೀಗ ಆನ್ ಲೈನ್ ಡೇಟಿಂಗ್ ಆ್ಯಪ್ ಮೂಲಕ ಸುಲಿಗೆ ಮಾಡ್ತಿದ್ದ ಇಬ್ಬರು ಆರೋಪಿಗಳನ್ನು ಹೆಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ನದೀಂ ಪಾಷ ಹಾಗೂ ನಾಗೇಶ್ ಎಂದು ಗುರುತಿಸಲಾಗಿದೆ. ಲೊಕ್ಯಾಂಟೋ ಆ್ಯಪ್ ಮೂಲಕ ಹುಡುಗಿ ಹೆಸರಿಲ್ಲಿ ಕಾಲ್ ಮಾಡಿ ಡೇಟಿಂಗ್ ನೆಪದಲ್ಲಿ ಕರೆಸಿ ಬಳಿಕ ಹಣ ದೋಚಿ ವಂಚಿಸುತ್ತಿದ್ದರು ಎನ್ನಲಾಗಿದೆ.
ಆರೋಪಿಗಳು ಲೊಕ್ಯಾಂಟೋ ಆ್ಯಪ್ ಬಳಸುವರನ್ನೇ ಟಾರ್ಗೆಟ್ ಮಾಡಿ, ಮೊದಲು ಸುಂದರ ಅಪರಿಚಿತ ಯುವತಿಯರ ಫೋಟೋ ಹಾಕಿ ಹುಡುಗಿ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡ್ತಿದ್ದರು. ಬಳಿಕ ಅಕೌಂಟ್ ನಿಂದ ಮೊದಲಿಗೆ ಮೆಸೇಜ್ ಮಾಡಿ ಸಲುಗೆಯಿಂದ ಮಾತಾಡುತ್ತಿದ್ದರು. ಹುಡುಗ ಮಾತಿಗೆ ಮರುಳಾದ ಅಂತ ಗೊತ್ತಾಗುತ್ತಿದ್ದಂತೆಯೇ ಒಂದು ಲೊಕೇಷನ್ ಕೊಟ್ಟು ಕರೆಸಿಕೊಳ್ಳುತ್ತಿದ್ದರು.
ಯುವಕ ಯುವತಿ ಕಳಿಸಿದ ಲೊಕೇಷನ್ಗೆ ಬರುತ್ತಿದ್ದಂತೆ ಲೋಕ್ಯಾಂಟೋ ಆ್ಯಪ್ ಸಂಪರ್ಕಿತ ವ್ಯಕ್ತಿ ಇವನೇನ ಎಂದು ತಿಳಿದುಕೊಂಡು ಬಳಿಕ ಚಾಕು ತೋರಿಸಿ ಆಟೋದಲ್ಲಿ ಕಿಡ್ನಾಪ್ ಮಾಡಿ ಸುಲಿಗೆ ಮಾಡುತ್ತಿದ್ದರು. ಹಣ, ಚಿನ್ನಾಭರಣ ಸುಲಿಗೆ ಮಾಡಿ, ಅಕೌಂಟ್ನಿಂದಲೂ ಹಣ ಡ್ರಾ ಮಾಡಿಸಿಕೊಳ್ಳುತ್ತಿದ್ದರು.
ಅಲ್ಲದೇ ಸ್ನೇಹಿತರಿಗೆ ಕರೆ ಮಾಡಿ ಗೂಗಲ್ ಪೇ, ಫೋನ್ ಪೇ ಕೂಡ ಮಾಡಿಸಿಕೊಳ್ಳುತ್ತಿದ್ದರು.
ಇಷ್ಟೇ ಅಲ್ಲದೇ ರಾತ್ರಿಯಿಡೀ ಬಂಧನದಲ್ಲಿ ಇರಿಸಿ ಬೆಲೆಬಾಳುವ ವಸ್ತುಗಳ ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ರೀತಿ ಸುಮಾರು 15ಕ್ಕೂ ಅಧಿಕ ಜನರಿಗೆ ಹುಡುಗಿ ಹೆಸರಲ್ಲಿ ಮೆಸೇಜ್ ಮಾಡಿ ಕರೆಸಿ ಸುಲಿಗೆ ಮಾಡಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಹೆಚ್ಎಸ್ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ಈ ರೀತಿಯ ಕೃತ್ಯ ಎಸಗಿದ್ದರು. ವ್ಯಕ್ತಿಯೊಬ್ಬನಿಂದ 60 ಸಾವಿರ ಹಣ ಸುಲಿಗೆ ಮಾಡಿದ್ದರು. ವಂಚನೆಗೊಳಗಾದ ವ್ಯಕ್ತಿ ದೂರು ನೀಡಿದ ಹಿನ್ನಲೆ ಕೇಸ್ ದಾಖಲಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.