ಬೆಂಗಳೂರು, ಆ 28 (DaijiworldNews/HR): ವಿಜ್ಞಾನವು ಬಾಹ್ಯ ಆತ್ಮಕ್ಕಾಗಿ ಹಾಗೂ ದೇವಾಲಯಗಳು ಅಂತರಂಗಕ್ಕಾಗಿ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಸೋಮನಾಥ್ ಪ್ರತಿಪಾದಿಸಿದ್ದಾರೆ.
ಚಂದ್ರಯಾನ 3 ಯಶಸ್ವಿ ಚಂದ್ರನ ಲ್ಯಾಂಡಿಂಗ್ ನಂತರ ಎಸ್ ಸೋಮನಾಥ್ ಅವರು ಕೇರಳದ ತಿರುವನಂತಪುರದ ಭದ್ರಕಾಳಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದು, ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜ್ಞಾನ ಮತ್ತು ಅಧ್ಯಾತ್ಮ ಎರಡು ವಿಭಿನ್ನ ಕ್ಷೇತ್ರಗಳಾಗಿದ್ದು, ಇವುಗಳನ್ನು ಹೆಣೆದುಕೊಳ್ಳುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು.
ವಿಕ್ರಮ್ ಲ್ಯಾಂಡರ್ ಇಳಿದಿರುವ ಜಾಗವನ್ನು ಪ್ರಧಾನಿ ಮೋದಿ ಅವರು ಶಿವಶಕ್ತಿ ಎಂದು ಹೆಸರಿಸಿ, ನಮ್ಮೆಲ್ಲರಿಗೂ ಅನ್ವಯವಾಗುವಂತೆ ಇಡೀ ದೇಶಕ್ಕೆ ಅರ್ಥವಾಗುವಂತೆ ಅದನ್ನು ವಿವರಿಸಿದ್ದಾರೆ. ದೇಶದ ಪ್ರಧಾನಿಯಾಗಿ ಚಂದ್ರ ಯಾನ-3ರ ಲ್ಯಾಂಡಿಂಗ್ ಪಾಯಿಂಟ್ಗೆ ಹೆಸರನ್ನು ಇಡುವ ಹಕ್ಕು ಅವರಿಗಿದೆ. ಹಾಗಾಗಿ ಶಿವಶಕ್ತಿ ಹೆಸರಿನಲ್ಲಿ ತಪ್ಪೇನಿಲ್ಲ. ಅದಷ್ಟೇ ಅಲ್ಲದೇ ಚಂದ್ರಯಾನ-2ರ ಲ್ಯಾಂಡಿಂಗ್ ಪಾಯಿಂಟ್ಗೂ ತಿರಂಗಾ ಪಾಯಿಂಟ್ ಎಂದು ಹೆಸರನ್ನು ಸೂಚಿಸಿದ್ದು ಈ ಎರಡು ಭಾರತೀಯ ಹೆಸರು ಗಳು ಸಮಂಜಸವಾಗಿವೆ ಎಂದಿದ್ದಾರೆ.
ಇನ್ನು ಜುಲೈ 13 ರಂದು ಚಂದ್ರಯಾನ 3 ಉಡಾವಣೆಗೆ ಮುನ್ನ, ವಿಜ್ಞಾನಿಗಳ ತಂಡ ತಿರುಪತಿಯ ಶ್ರೀ ಚೆಂಗಾಲಮ್ಮ ದೇವಸ್ಥಾನದಲ್ಲಿ ಆಶೀರ್ವಾದ ಪಡೆದಿದ್ದು, ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು.