ಬೆಂಗಳೂರು, ಆ 28 (DaijiworldNews/MS): “ಬಿಜೆಪಿ ಸರ್ಕಾರದ ವಿರುದ್ಧ ಕೋವಿಡ್ ಹಗರಣ, ಆಮ್ಲಜನಕ ದುರಂತ, ಪಿಎಸ್ಐ ಸೇರಿದಂತೆ ನಾವು ನೂರಾರು ಆರೋಪ ಮಾಡಿದ್ದೇವೆ. ಅವರು ಯಾವ ರೀತಿ ತನಿಖೆ ಮಾಡಿದ್ದರು ಎಂಬುದು ನಮಗೆ ಗೊತ್ತಿದೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವು ಮುಂದುವರೆಯುತ್ತಾ ಇದ್ದೇವೆ. ಬಿಜೆಪಿಯವರು ಪ್ರಾಮಾಣಿಕವಾಗಿದ್ದರೆ ನ್ಯಾಯಾಂಗ ತನಿಖೆ ಬಗ್ಗೆ ಭಯ ಏಕೆ?” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಶ್ನಿಸಿದರು.
ಮಾಧ್ಯಮಗಳು ರಾಜ್ಯ ಸರ್ಕಾರ ಕೋವಿಡ್ ಹಗರಣಗಳನ್ನ ನ್ಯಾಯಾಂಗ ತನಿಖೆಗೆ ಆದೇಶಿಸಿರುವುದರ ಹಿಂದೆ ದ್ವೇಷ ರಾಜಕೀಯವಿದೆ ಎಂಬ ಬಿಜೆಪಿ ಆರೋಪದ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು “ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಪತ್ನಿ ಇತ್ತೀಚೆಗೆ ಮುಖ್ಯಮಂತ್ರಿಗಳು ಹಾಗೂ ನನ್ನನ್ನು ಭೇಟಿಯಾಗಿ ನ್ಯಾಯ ದೊರಕಿಸಿಕೊಡಬೇಕಾಗಿ ಮನವಿ ಮಾಡಿದರು. ಅವರ ಮನವಿಗೆ ಸ್ಪಂದಿಸಿದ್ದೇವೆ. ಬಿಜೆಪಿಯವರು ಈ ಪ್ರಕರಣದಲ್ಲಿ ಏನು ಮಾಡಿದರು? ತನಿಖೆ ನಡೆಯುವುದ್ದಕ್ಕೆ ಮುಂಚಿತವಾಗಿಯೇ ಅಂದಿನ ಮುಖ್ಯಮಂತ್ರಿಗಳಾದಿಯಾಗಿ, ಸಚಿವರು, ಯಡಿಯೂರಪ್ಪ ಅವರೆಲ್ಲಾ "ಈಶ್ವರಪ್ಪ ದೋಷಮುಕ್ತರಾಗಿ" ಬರುತ್ತಾರೆ ಎಂದು ತನಿಖಾಧಿಕಾರಿಗಳಿಗೆ ಸುಳಿವು ನೀಡಿದರು. ಆದರೆ ನಾವು ಈ ರೀತಿಯ ಕೆಲಸ ಮಾಡಲು ಹೋಗುವುದಿಲ್ಲ, ನಾವು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಕಾನೂನಿನ ಚೌಕಟ್ಟಿನಲ್ಲೇ ತನಿಖಾ ಆಯೋಗ ರಚಿಸಿದ್ದೇವೆ.
ಇದರಲ್ಲಿ ಯಾವುದೇ ದ್ವೇಷ ರಾಜಕಾರಣವಿಲ್ಲ. ಬೊಮ್ಮಾಯಿ ಅವರಿಂದ ನಮಗೆ ಪ್ರಮಾಣ ಪತ್ರ ಬೇಡ. ಆಕ್ಸಿಜನ್ ದುರಂತದಲ್ಲಿ 36 ಜನ ಸತ್ತಿದ್ದರು. ಆದರೆ ಆಗಿನ ಸಚಿವರು ಕೇವಲ 3 ಜನ ಮಾತ್ರ ಸತ್ತಿದ್ದಾರೆ ಎಂದು ಹೇಳಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಹೊಣೆಗಾರಿಕೆ ಮಾಡಿಲ್ಲ. ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಈ ಪ್ರಕರಣ ತನಿಖೆ ಆಗಬಾರದೇ? ಕೋವಿಡ್ ಉಪಕರಣಗಳ ಖರೀದಿಯಲ್ಲಿ ಕೇಂದ್ರ ಸರ್ಕಾರ ಮಾಡಿರುವ ವೆಚ್ಚದ ದರಕ್ಕೂ ರಾಜ್ಯ ಸರ್ಕಾರದ ವೆಚ್ಚದ ದರಕ್ಕೂ ಭಾರಿ ವ್ಯತ್ಯಾಸವಿದೆ. ಇನ್ನು ಬೆಡ್ ಬ್ಲಾಕಿಂಗ್ ವಿಚಾರವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪ ಮಾಡಿದ್ದರು. ಇದೆಲ್ಲದರ ಬಗ್ಗೆ ತನಿಖೆ ಮಾಡಬೇಕಲ್ಲವೇ? ಇನ್ನು ಸರ್ಕಾರ ರೂಪಿಸಿದ 10 ಸಾವಿರ ಬೆಡ್ ಗಳ ಕೇಂದ್ರದಲ್ಲಿ ಯಾರೂ ಚಿಕಿತ್ಸೆ ಪಡೆಲಿಲ್ಲ. ಇದಕ್ಕೆ ಸಂಬಂಧಿಸಿದ ಗುತ್ತಿಗೆದಾರರು ಕಣ್ಣೀರು ಹಾಕುತ್ತಿದ್ದಾರೆ. ಈ ಎಲ್ಲದರ ಬಗ್ಗೆ ತನಿಖೆ ಮಾಡಿ ರಾಜ್ಯದ ಜನರಿಗೆ ನ್ಯಾಯ ಒದಗಿಸಿಕೊಡಬೇಕು ಎಂಬುದು ನಮ್ಮ ಬದ್ಧತೆ” ಎಂದು ತಿಳಿಸಿದರು.
“ಬಿಜೆಪಿ ನಾಯಕರು ನಮ್ಮ ಮೇಲೆ ಸುಳ್ಳು ಆರೋಪ ಮಾಡಿ, ನಾವು ಕಷ್ಟ ಅನುಭವಿಸುವಂತೆ ಮಾಡಿಲ್ಲವೇ? 79 a,b ಎಷ್ಟು ಪ್ರಕರಣಗಳು ಇದ್ದವು, ಎಷ್ಟೊಂದು ಪ್ರಕರಣಗಳನ್ನು ತನಿಖೆಗೆ ತೆಗೆದುಕೊಳ್ಳಬೇಕಿತ್ತು, ಆಸ್ತಿಗಳ ಮೌಲ್ಯ ಮಾಪನದಲ್ಲಿ ಅಕ್ರಮ ಎಸಗಿಲ್ಲವೇ? ಹೀಗೆ ಬೆಂಗಳೂರು ಸುತ್ತಾ ಮುತ್ತಾ ನಡೆದಿರುವ ಭೂ ಹಗರಣಗಳ ಪಟ್ಟಿ ಹೇಳುತ್ತಾ ಹೋಗಲೇ? ನಾವು ಇನ್ನೂ ಏನೇನು ತೆಗೆಯಬೇಕು ಕೇಳಿ ಅವರನ್ನು, ನನ್ನ ಬಳಿ ಇರುವ ಎಲ್ಲವನ್ನು ಹೊರಗೆ ತೆಗೆಯುತ್ತೇವೆ” ಎಂದು ಸವಾಲು ಹಾಕಿದರು.