ಬೆಂಗಳೂರು, ಆ 29 (DaijiworldNews/MS): ಬೆಂಗಳೂರಿನ ಶಂಕಿತ ಉಗ್ರನ ಮನೆಯಲ್ಲಿ ಗ್ರೆನೇಡ್ ಪತ್ತೆ ಪ್ರಕರಣ ಸಂಬಂಧ ಪೊಲೀಸರು ಪ್ರಮುಖ ಆರೋಪಿ ಜುನೈದ್ ನ , ಸಹಚರನನ್ನು ಬಂಧಿಸಿದ್ದಾರೆ.
ಶಂಕಿತ ಉಗ್ರ ಜುನೈದ್ ಸಹಚರ ಮೊಹಮ್ಮದ್ ಅರ್ಷದ್ನನ್ನು ಆರ್ ಟಿನಗರದ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪದಡಿ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದು ಜುನೈದ್ ಸಹಚರ ಅರ್ಷದ್ ನಾಪತ್ತೆಯಾಗಿದ್ದ. ನಾಲ್ಕು ವರ್ಷದಿಂದ ತಲೆಮರೆಸಿಕೊಂಡಿರುವ ಅರ್ಷದ್ ವಿರುದ್ಧ 17 ಪ್ರಕರಣ ದಾಖಲಾಗಿದ್ದವು.
ಅರ್ಷದ್ ಆರ್.ಟಿ.ನಗರದ ಮನೆಯೊಂದರಲ್ಲಿ ವಾಸವಾಗಿರುವ ಮಾಹಿತಿ ತಿಳಿದ ಪೊಲೀಸರು ಸಿಸಿಟಿ ದೃಶ್ಯಗಳನ್ನು ಪರಿಶೀಲನೆ ಮಾಡಿ ಆತ ಮನೆಯೊಳಗಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ತಕ್ಷಣ ಪೊಲೀಸರು ಕಾರ್ಯಾಚರಣೆ ಪ್ರಾರಂಭಿಸಿ ಮನೆ ಬಾಗಿಲು ಒಡೆದು ಒಳಗೆ ಪ್ರವೇಶ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡಿದ್ದ ಅರ್ಷದ್ ಕತ್ತು ಕೊಯ್ದುಕೊಳ್ಳಲು ಮುಂದಾಗಿದ್ದಾನೆ. ಅಲ್ಲದೇ ಎರಡನೇ ಮಹಡಿಯಿಂದ ಕೆಳಗೆ ಜಿಗಿಯಲು ಮೇಲೆ ಹೋಗುತ್ತಿರುವಾಗ ಪೊಲೀಸರು ಆತನನ್ನು ಅಡ್ಡಗಟ್ಟಿ ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಅರ್ಷದ್ ಖಾನ್ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.