ನವದೆಹಲಿ,ಏ09(AZM):ಫ್ರಾನ್ಸ್ ಜತೆಗೆ ಮಾಡಿಕೊಂಡಿರುವ ರಫೇಲ್ ಯುದ್ಧ ವಿಮಾನ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಇರುವ ದಾಖಲೆಗಳನ್ನು ಪುನರ್ ಪರಿಶೀಲಿಸಿ, ಈಗಾಗಲೇ ನೀಡಿದ ತೀರ್ಪು ಮತ್ತೊಮ್ಮೆ ಪರಾಮರ್ಶೆ ಮಾಡಬೇಕು ಎಂಬ ಆಕ್ಷೇಪಣೆಗೆ ಸಂಬಂಧಿಸಿದಂತೆ ಏ.10ರಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಲಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠವು ತೀರ್ಪು ಪ್ರಕಟಿಸಲಿದ್ದು, ಕೇಂದ್ರದ ಮಾಜಿ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ ಹಾಗೂ ವಕೀಲರಾದ ಪ್ರಶಾಂತ್ ಭೂಷಣ್ ಸಲ್ಲಿಸಿದ ಪ್ರಾಥಮಿಕ ಅಕ್ಷೇಪಣೆಗೆ ಸಂಬಂಧಿಸಿದ ತೀರ್ಪನ್ನು ಮಾರ್ಚ್ ಹದಿನಾಲ್ಕರಂದು ಸುಪ್ರೀಂ ಕೋರ್ಟ್ ಕಾಯ್ದಿರಿಸಿತ್ತು.
ಅದಕ್ಕೂ ಮುನ್ನ ರಫೇಲ್ ವ್ಯವಹಾರಕ್ಕೆ ವಿರುದ್ಧವಾಗಿ ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ಡಿಸೆಂಬರ್ ಹದಿನಾಲ್ಕರಂದು ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. "ಮೊದಲಿಗೆ ಕೇಂದ್ರ ಸರಕಾರದಿಂದ ಎತ್ತಿರುವ ಪ್ರಾಥಮಿಕ ಆಕ್ಷೇಪಣೆಗಳನ್ನು ನಿರ್ಧರಿಸಿ, ಆ ನಂತರ ಪುನರ್ ಪರಿಶೀಲನಾ ಅರ್ಜಿಯ ಇತರ ಅಂಶಗಳ ಬಗ್ಗೆ ಗಮನ ಹರಿಸುವುದಾಗಿ" ಪೀಠವು ಹೇಳಿತ್ತು. ಜತೆಗೆ, ಕೇಂದ್ರದ ಆಕ್ಷೇಪಣೆಗೆ ಸಹಮತ ಇಲ್ಲದಿದ್ದಲ್ಲಿ ಮಾತ್ರ ಇತರ ಸಂಗತಿಗಳ ಬಗ್ಗೆ ವಿಚಾರಣೆ ನಡೆಸುವುದಾಗಿ ತಿಳಿಸಲಾಗಿತ್ತು.