ಮೈಸೂರು, ಆ 29 (DaijiworldNews/AK): ಈ ಬಾರಿಯ ನಾಡಹಬ್ಬ ದಸರಾ ಸಂಗೀತ ನಿರ್ದೇಶಕ , ಸಂಗೀತ ಸಾಮ್ರಾಟ್ ಹಂಸಲೇಖ ಅವರು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಜಿಲ್ಲೆಯ ಪ್ರವಾಸದಲ್ಲಿರುವ ಅವರು ಹರಕೆ ತೀರಿಸಲು ಚಾಮುಂಡಿ ಬೆಟ್ಟಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಭೇಟಿ ನೀಡಿದರು. ಬಳಿಕ ಸಿಎಂ ಚಾಮುಂಡೇಶ್ವರಿಗೆ ರೇಷ್ಮೆ ಸೀರೆ ಒಪ್ಪಿಸಲಾಯಿತು.
ಗ್ಯಾರಂಟಿ ಕಾರ್ಡ್ ವಿಚಾರವಾಗಿ ಹರಕೆ ಮಾಡಲಾಗಿತ್ತು. ಈ ವಿಚಾರವಾಗಿ ಪೂಜೆ ಸಲ್ಲಿಸಿದ ಬಳಿಕ ಚಾಮುಂಡಿ ದೇವಿಯ ಮುಂಭಾಗ ಸಿಎಂ ಹಾಗೂ ಡಿಸಿಎಂ ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು.
ಬಳಿಕ ಮಾದ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಡಿ.ಕೆ ಶಿವಕುಮಾರ್ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿ, ವಿರೋಧ ಪಕ್ಷಗಳು ನಮ್ಮನ್ನ ಎಷ್ಟು ದೂರ ಮಾಡಲು ಯತ್ನ ಮಾಡಲು ಪ್ರಯತ್ನಿಸಿದರು ನಾವಿಬ್ಬರು ಅಷ್ಟು ಹತ್ತಿರವಾಗುತ್ತಿದ್ದೇವೆ. ವಿರೋಧ ಪಕ್ಷಗಳು ನಮ್ಮಿಬ್ಬರ ಸಂಬಂಧದ ವಿಚಾರದ ಬಗ್ಗೆ ಮಾತನಾಡುತ್ತಲೇ ಇರಲಿ. ನಾವು ಮಾತ್ರ ಸದಾ ಒಟ್ಟಾಗಿರುವುದನ್ನ ನೀವು ನೋಡುತ್ತಲೇ ಇರುತ್ತೀರಿ ಎಂದಿದ್ದಾರೆ.
ಇದೇ ವೇಳೆ ಬಿಜೆಪಿ ಸರ್ಕಾರದ ಹಗರಣಗಳ ವಿಚಾರವಾಗಿ ತನಿಖೆ ಮಾಡುತ್ತೇವೆ. ಇದರಲ್ಲಿ ಟಾರ್ಗೆಟ್ ಎಂಬ ಪ್ರಶ್ನೆಯೇ ಬರುವುದಿಲ್ಲ. ಪಿಎಸ್ಐ ಹಗರಣ, 40% ಹಗರಣ, ಕೋವಿಡ್ ಹಗರಣ ಎಲ್ಲದನ್ನೂ ತನಿಖೆಗೆ ಒಳಪಡಿಸಿದ್ದೇವೆ. ಹಗರಣದ ಬಗ್ಗೆ ತನಿಖೆ ಮಾಡಿಸದೆ ಇವರು ತಿಂದುಕೊಂಡು ಹಾಗೇ ಹೋಗಲಿ ಎಂದು ಬಿಡಬೇಕಾ? ಅವರ ಕಾಲದಲ್ಲೇ ಹಗರಣ ತನಿಖೆಗೆ ಆಗ್ರಹಿಸಿದ್ದೇವೆ. ಅವರು ತನಿಖೆ ಮಾಡಿಸಲಿಲ್ಲ. ನಾವು ತನಿಖೆ ಮಾಡಿಸುತ್ತಿದ್ದೇವೆ ಎಂದು ಹೇಳಿದರು.