ಮೈಸೂರು, ಆ 29 (DaijiworldNews/MS): "ನಾಡ ದೇವತೆ ಚಾಮುಂಡಿ ದೇವಿ ಹಾಗೂ ರಾಜ್ಯದ ಜನರ ಆಶೀರ್ವಾದದಿಂದ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ. ಚುನಾವಣೆಗೂ ಮುನ್ನ ದೇವಿ ಸನ್ನಿಧಾನದಲ್ಲಿ ಕೊಟ್ಟ ಮಾತಿನಂತೆ ನಮ್ಮ ಸರ್ಕಾರ ನಡೆದಿದೆ. ನುಡಿದಂತೆ ನಡೆದಿರುವುದು ಈ ಸರ್ಕಾರದ ಸಾಧನೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್ ಅವರು "ಈ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಸನ್ನಿದಾನದಲ್ಲಿ ಚುನಾವಣೆಗೂ ಮುಂಚಿತವಾಗಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಇಟ್ಟು ಪೂಜೆ ಸಲ್ಲಿಸಿದ್ದೆವು.
1.10 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ತಲುಪಲಿದೆ, 1.41 ಲಕ್ಷ ಮನೆಗಳಿಗೆ ಗೃಹಜ್ಯೋತಿ ಯೋಜನೆ ತಲುಪಿದೆ, ಶೂನ್ಯ ವಿದ್ಯುತ್ ಬಿಲ್ ಬಂದಿದೆ, 46 ಕೋಟಿ ಹೆಣ್ಣು ಮಕ್ಕಳು ಬಸ್ನಲ್ಲಿ ಪ್ರಯಾಣ ಮಾಡಿದ್ದಾರೆ. 1.39 ಕೋಟಿ ಕುಟುಂಬಗಳಿಗೆ ಅನ್ನಭಾಗ್ಯದ ಪ್ರಯೋಜನ ತಲುಪಿದೆ ನೂರು ದಿನದಲ್ಲಿ ಸಾಕಷ್ಟು ಸಾಧನೆಗಳನ್ನು ನಾವು ಮಾಡಿದ್ದೇವೆ.
ನೂರು ದಿನಗಳಲ್ಲಿ ನಮ್ಮ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಭರ್ಜರಿ ಕೊಡುಗೆಗಳನ್ನು ನೀಡಿದೆ. ಈ ದೇವಿ ಹಾಗೂ ನಮ್ಮ ನಡುವಣ ಸಂಬಂಧ ಭಕ್ತ ಹಾಗೂ ಭಗವಂತನ ನಡುವಿನ ಸಂಬಂಧ. ನಮ್ಮ ಬೇಡಿಕೆಯನ್ನು ಏನಿದೆ ಅದನ್ನು ದೇವಿ ಈಡೇರಿಸಿದ್ದಾಳೆ.
ಮೈಸೂರಿನ ಭಾಗದ ಜನತೆ ನಮ್ಮ ಸರ್ಕಾರ ರಚನೆಗೆ ಹೆಚ್ಚಿನ ಶಕ್ತಿ ಕೊಟ್ಟಿದ್ದಾರೆ. ರಾಜ್ಯದ ಮಹಿಳೆಯರಿಗೆ ದೇವಿ ಚಾಮುಂಡೇಶ್ವರಿಯ ಆಶೀರ್ವಾದ ಇರಲಿ ಎಂದು ಗೃಹಲಕ್ಷ್ಮೀ ಯನ್ನು ಇಲ್ಲಿ ಪ್ರಾರಂಭ ಮಾಡುತ್ತಿದ್ದೇವೆ. ಸುಮಾರು 12,600 ಕಡೆ ಈ ಕಾರ್ಯಕ್ರಮ ನೇರಪ್ರಸಾರವಾಗಲಿದೆ."
ವಿರೋಧ ಪಕ್ಷಗಳು ಸಿಎಂ ಹಾಗೂ ನಿಮ್ಮ ನಡುವಿನ ಸಂಬಂಧಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ "ಅವರು ಅನುಮಾನ ಪಡುತ್ತಲೇ ಇರಲಿ, ನಾವು ಒಂದಾಗಿರುವುದನ್ನು ನೀವೆಲ್ಲಾ ನೋಡುತ್ತಲೇ ಇರಿ. ಅವರು ಅನುಮಾನ ಪಟ್ಟಷ್ಟು ನಾವಿಬ್ಬರು ಹತ್ತಿರ ಆಗುತ್ತಲೇ ಇದ್ದೇವೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಡಿ.ಕೆ.ಶಿವಕುಮಾರ್ ಅವರು ಒಕ್ಕೊರಲಿನಿಂದ ಹೇಳಿದರು.
ಕಾವೇರಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, "ಕಾವೇರಿ ನೀರಿನ ವಿಚಾರದಲ್ಲಿ ಮಧ್ಯಾಹ್ನ ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ ಆಗ ಅದಕ್ಕೆ ಪ್ರತಿಕ್ರಿಯೆ ನೀಡುತ್ತೇವೆ. ನಾವು ನಮ್ಮ ರಾಜ್ಯದ ಹಿತಾಸಕ್ತಿಗೆ ಧಕ್ಕೆ ಬರದಂತೆ ನೋಡಿಕೊಳ್ಳುತ್ತೇವೆ" ಎಂದರು