ದಾವಣಗೆರೆ, ಆ 29 (DaijiworldNews/AK): ಕಾಂಗ್ರೇಸ್ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾಗಿರುವ ಯುವ ನಿಧಿ ಯೋಜನೆ ಡಿಸೆಂಬರ್ನಲ್ಲಿ ಜಾರಿಗೊಳಿಸಲಾಗುವುದು ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಸುಳಿವು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಕಾಂಗ್ರೆಸ್ ಘೋಷಿಸಿದ ಐದು ಯೋಜನೆಗಳ ಪೈಕಿ ಮೂರು ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ನಾಲ್ಕನೇ ಯೋಜನೆ ಗೃಹಲಕ್ಷ್ಮೀ ಯೋಜನೆಯನ್ನು ಆಗಸ್ಟ್ 30 ರಂದು ಜಾರಿಗೆ ತರಲಾಗುವುದು ಎಂದರು.
ನಮ್ಮ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ನಾಲ್ಕನೇ ಭರವಸೆಯಾಗಿರುವ ಗೃಹಲಕ್ಷ್ಮೀ ಯೋಜನೆಯನ್ನು ನಾಳೆ ಜಾರಿಗೊಳಿಸುತ್ತಿದ್ದೇವೆ. ಉದ್ಘಾಟನಾ ಕಾರ್ಯಕ್ರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಡಿಸೆಂಬರ್ನಲ್ಲಿ ಯುವ ನಿಧಿ ಯೋಜನೆಯೂ ಜಾರಿಯಾಗಲಿದೆ’ ಎಂದರು.
ಕರ್ನಾಟಕ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಯುವ ನಿಧಿ ಯೋಜನೆಯು ಪದವೀಧರರು ಮತ್ತು ಡಿಪ್ಲೋಮಾ ಪೂರ್ಣಗೊಳಿಸಿ ಉದ್ಯೋಗ ಹುಡುಕಾಡುತ್ತಿರುವವರಿಗೆ ಆರ್ಥಿಕ ನೆರವು ನೀಡುವ ಭರವಸೆಯನ್ನು ನೀಡುತ್ತದೆ.ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3,000 ರೂ. ಮತ್ತು ನಿರುದ್ಯೋಗಿ ಡಿಪ್ಲೊಮಾ ಹೊಂದಿರುವವರಿಗೆ 1,500 ರೂ. ನೀಡಲಾಗುತ್ತದೆ.
ನಿರುದ್ಯೋಗಿ ಪದವೀಧರನಿಗೆ 2 ವರ್ಷಗಳ ವರೆಗೆ ಮಾತ್ರ ಈ ಪ್ರೋತ್ಸಾಹ ಧನ ಲಭ್ಯವಾಗುತ್ತದೆ. ಒಂದೊಮ್ಮೆ 2 ವರ್ಷಕ್ಕೂ ಮುನ್ನವೇ ಉದ್ಯೋಗ ಲಭ್ಯವಾದರೆ ಯೋಜನೆ ಹಣ ಸ್ಥಗಿತಗೊಳ್ಳುತ್ತದೆ.