ಧಾರವಾಡ,ಆ 29 (DaijiworldNews/AK): ನಮ್ಮ ಪಕ್ಷ ಎರಡೂ ಕಡೆ ಬಾಗಿಲು ಇರುವ ಬಸ್ ಇದ್ದಂತೆ. ಬೇಕಾದವರು ಬರಬಹುದು ಎಂದು ಸಚಿವ ಸಂತೋಷ ಲಾಡ್ ಹೇಳಿದ್ದಾರೆ. ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ನೀಡಿರುವ ದ್ವಂದ್ವ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮುನೇನಕೊಪ್ಪ ಹಾಗೂ ಚಿಕ್ಕನಗೌಡರು ಪಕ್ಷಕ್ಕೆ ಬರುತ್ತಾರೆ ಎಂಬ ಮಾಹಿತಿ ಇತ್ತು. ಕೆಲವರು ಸ್ವಯಂ ಪ್ರೇರಣೆಯಿಂದ ಪಕ್ಷಕ್ಕೆ ಬರುವುದಾಗಿ ಹೇಳಿದ್ದಾರೆ. ಇನ್ನೂ ಕೆಲವರು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದ್ದಾರೆ. ನಮ್ಮ ಪಕ್ಷಕ್ಕೆ ಸೇರ್ಪಡೆಯಾಗ ಬಯಸುವ ಆಸಕ್ತರನ್ನು ನಾವು ಸ್ವಾಗತಿಸುತ್ತೇವೆ. ನಮ್ಮ ಪಕ್ಷದಲ್ಲಿ ಯಾವುದೂ ರಿವರ್ಸ್ ಇಲ್ಲ. ಪ್ರಜಾಪ್ರಭುತ್ವದ ದೊಡ್ಡ ಪಕ್ಷ ನಮ್ಮದು. ನಮ್ಮ ಪಕ್ಷಕ್ಕೆ ಯಾರು ಬೇಕಾದರೂ ಬರಬಹುದು ಎಂದರು.
ಬಿಜೆಪಿಯ ಶಾಸಕರು ಸಿಎಂ ಅವರನ್ನು ಭೇಟಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಾಸಕರು ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿದಂತೆ ಭೇಟಿಯಾಗಿರುತ್ತಾರೆ. ರಾಜಕೀಯ ಅಜೆಂಡಾ ಸಹ ಇರಬಹುದು. ಯಾರ್ಯಾರು ಸಿಎಂ ಅವರನ್ನು ಭೇಟಿ ಮಾಡಿದ್ದಾರೋ ಯಾಕೆ ಭೇಟಿ ಆಗಿದ್ದಾರೆ ಅಂತಾ ಅವರನ್ನೇ ಕೇಳಬೇಕು ಎಂದರು.