ಬೆಂಗಳೂರು, ಆ 29 (DaijiworldNews/HR): ಬೆಳ್ಳಂದೂರಿನನಲ್ಲಿರುವ ಅಪಾರ್ಟ್ಮೆಂಟ್ನ 12ನೇ ಮಹಡಿಯಿಂದ ಬಿದ್ದು 10ನೇ ತರಗತಿಯ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಜೆಸ್ಸಿಕಾ (15) ಸಾವನ್ನಪ್ಪಿದ ವಿದ್ಯಾರ್ಥಿನಿ.
ಕಳೆದ 2 ವರ್ಷಗಳಿಂದ ವಿದ್ಯಾರ್ಥಿನಿ ತನ್ನ ತಂದೆ ಹಾಗೂ ತಾಯಿಯೊಂದಿಗೆ ಕ್ಲಾಸಿಕ್ ಅಪಾರ್ಟ್ಮೆಂಟ್ನ 11ನೇ ಮಹಡಿಯಲ್ಲಿ ವಾಸವಿದ್ದು, ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಮೂಲತಃ ತಮಿಳುನಾಡಿನ ಕುಟುಂಬವಾಗಿದ್ದು, ತಂದೆ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಜೆಸ್ಸಿಕಾ ಇತ್ತೀಚೆಗೆ ಶಾಲೆಗೂ ಸರಿಯಾಗಿ ಹೋಗುತ್ತಿರಲಿಲ್ಲ ಎನ್ನಲಾಗಿದ್ದು, ಕಳೆದ 3 ತಿಂಗಳಲ್ಲಿ 6 ದಿನ ಮಾತ್ರವೇ ಜೆಸ್ಸಿಕಾ ಶಾಲೆಗೆ ಹೋಗಿದ್ದಳು. ಇಂದು ಬೆಳಗ್ಗೆ ಬಾಲಕಿ ಶಾಲೆಗೆ ಹೋಗಿ ಪುನಃ ವಾಪಸ್ ಬಂದಿದ್ದಾಳೆ. ನಂತರ ಟೀಚರ್ ತಾಯಿಗೆ ಕರೆ ಮಾಡಿ ಮಗಳು ಶಾಲೆಗೆ ಬಂದಿಲ್ಲ ಎಂದು ಹೇಳಿದ್ದಾರೆ. ನಂತರ ಪೋಷಕರು ಪರಿಶೀಲನೆ ಮಾಡಿದಾಗ ವಿಚಾರ ತಿಳಿದುಬಂದಿದೆ.
ಜೆಸ್ಸಿಕಾ ಕುಟುಂಬ ವಾಸವಿದ್ದ ಮಹಡಿಯಿಂದ ಮೇಲಿನ ಮಹಡಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821