ಬೆಂಗಳೂರು,,ಆ 30 (DaijiworldNews/AK): ರಾಜ್ಯ ಸರ್ಕಾರ ನೂರು ದಿನ ಪೂರೈಸಿರುವ ಸಂಭ್ರಮದಲ್ಲಿದೆ. ಇತ್ತ ಬಿಜೆಪಿ ನೂರು ದಿನ ನೂರು ವೈಫಲ್ಯ ಶೀರ್ಷಿಕೆಯಡಿ ಜಾರ್ಜ್ಶೀಟ್ ಬಿಡುಗಡೆ ಮಾಡಿದೆ. ಇದರಲ್ಲಿ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ, ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದೆ. ನನ್ನ ಮೇಲಿನ ಆರೋಪ ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಡಿಕೆ ಶಿವಕುಮಾರ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಬಿಜೆಪಿಯವರು ಆರೋಪ ಸಾಬೀತು ಮಾಡಲಿ. ಇವರದ್ದನ್ನು ಬಿಚ್ಚೋ ಕಾಲ ಬರುತ್ತದೆ ಬಿಚ್ಚುತ್ತೇನೆ. ನನ್ನ ಮೇಲಿನ ಆರೋಪ ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇವೆ ಎಂದು ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿದರು.
ನೂರು ದಿನದಲ್ಲಿ 4 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಮೊದಲ ಕ್ಯಾಬಿನೆಟ್ನಲ್ಲೇ ಎಲ್ಲಾ ಗ್ಯಾರಂಟಿ ಇತ್ಯರ್ಥ ಮಾಡಿದ್ದೇವೆ. ಬಿಜೆಪಿಯವರದ್ದು ಭರವಸೆ, ನಮ್ಮದು ಗ್ಯಾರಂಟಿ.
ಗೃಹಲಕ್ಷ್ಮೀ ಯೋಜನೆಗೆ ಇಂದು ಚಾಲನೆ ನೀಡುತ್ತಿದ್ದು, ನಾಡಿನೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಎಲ್ಲರ ಮನೆಗಳಲ್ಲಿ ಹೆಣ್ಣು ಮಕ್ಕಳು ಹಬ್ಬದ ಸಂಭ್ರಮದಲ್ಲಿದ್ದಾರೆ. 1.10 ಕೋಟಿ ಮಹಿಳೆಯರು ನೋಂದಣಿ ಮಾಡಿಸಿದ್ದಾರೆ, ಸಿಎಂ ಸಿದ್ದರಾಮಯ್ಯ, ನಾನು ಚೆಕ್ಗೆ ಸಹಿ ಹಾಕಿದ್ದು, ಯಜಮಾನಿಯರ ಬ್ಯಾಂಕ್ ಖಾತೆಗೆ 2000 ರೂ ಹಣ ಜಮೆಯಾಗುತ್ತೆ ಎಂದರು.