ಹುಬ್ಬಳ್ಳಿ, ಆ 30 (DaijiworldNews/AK):ಲೋಕಸಭಾ ಚುನಾವಣೆಯ ಗಿಮಿಕ್ ಇಟ್ಟುಕೊಂಡೇ ಪ್ರಧಾನಿ ನರೇಂದ್ರ ಮೋದಿ ಅಡುಗೆ ಅನಿಲ ಸಿಲಿಂಡರ್ ದರ ಇಳಿಸಿದ್ದಾರೆ ಎಂದು ಮಾಜಿ ಸಿಎಂ ಹಾಗೂ ವಿಧಾನ ಪರಿಷತ್ತು ಸದಸ್ಯ ಜಗದೀಶ ಶೆಟ್ಟರ ಆರೋಪಿಸಿದರು.
ಗೃಹಲಕ್ಷ್ಮಿ ಯೋಜನೆಗೆ ಶಬರಿ ನಗರದಲ್ಲಿ ಬುಧವಾರ ಸಾಂಕೇತಿಕವಾಗಿ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ ಒಳಗೆ ಲೋಕಸಭಾ ಚುನಾವಣೆ ಮಾಡುವ ಸಂಭವವಿದ್ದು, ಅಷ್ಟರೊಳಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಲವು ದರಗಳನ್ನು ಇಳಿಸಬಹುದು, ಸಾಧ್ಯವಾದರೇ ಉಚಿತ ಯೋಜನೆಗಳನ್ನು ಘೋಷಿಸಬಹುದು ಎಂದರು.
ಕೇಂದ್ರ ಸರ್ಕಾರ ಈಗಾಗಲೇ ಸಿಲಿಂಡರ್ ದರವನ್ನು ಸಾವಿರ ರೂ. ಹೆಚ್ಚಿಸಿ, ಇದೀಗ ಕೇವಲ 200 ರೂ. ಇಳಿಸಿದರೇ ಏನು ಉಪಯೋಗ. ಅವರಿಗೆ ಜನರ ಬಗ್ಗೆ ನಿಜವಾಗಲೂ ಕಾಳಜಿಯಿದ್ದರೆ ಕನಿಷ್ಠ 500 ರೂ. ಇಳಿಸಬೇಕಿತ್ತು ಎಂದರು.
ಕಾಂಗ್ರೆಸ್ ಗ್ಯಾರಂಟಿಗಳ ಅನುಷ್ಠಾನದಿಂದ ನಿರಾಸೆಗೊಂಡ ಬಿಜೆಪಿ, ಇನ್ನಿಲ್ಲದ ಆರೋಪಗಳನ್ನು ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧೋಗತಿಗೆ ಹೋಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರವೂ ಸೇರಿದಂತೆ ರಾಜ್ಯದಲ್ಲಿ 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಗೆಲ್ಲಲಿದೆ ಎಂದರು.