ಬೆಂಗಳೂರು,ಆ 30 (DaijiworldNews/AK): ಜಗತ್ತಿನಲ್ಲಿ ಅತೀ ದೊಡ್ಡ ಪಾರ್ಟಿ ಜನತಾ ಪಾರ್ಟಿ. ಮೋದಿಯಂತವರು ಇದ್ದಾಗಲೂ ಹೀಗೆ ಹೇಳುವುದು ಕೆಳಮಟ್ಟದ ಹೇಳಿಕೆ. ಬಿಜೆಪಿ ಒಳಗೆ ಇದ್ದುಕೊಂಡು ಹೇಳಿಕೆ ಕೊಡೋದು ಸರಿಯಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಕೆಲವು ಜನ ಪಾರ್ಟಿ ಬಿಡ್ತೀವಿ ಎಂದು ಬೆದರಿಕೆ ಹಾಕುವುದು ಸರಿಯಲ್ಲ. ಪಕ್ಷದಿಂದ ಗೆದ್ದಿದ್ದೇವೆ, ಮಂತ್ರಿಗಳಾಗಿದ್ದೀವಿ. ಏನು ಕರ್ನಾಟಕದಲ್ಲಿ ಬಿಜೆಪಿ ಮುಗಿದೋಯ್ತಾ?, ಪ್ರಿಯಾಂಕ್ ಖರ್ಗೆ ಹೇಳುತ್ತಾರೆ, ಮುಗಿದೋಯ್ತು ಬಿಜೆಪಿ ಕಥೆ ಅಂತಾರೆ. ಇದು ಎಷ್ಟು ಬಾಲಿಷ ಹೇಳಿಕೆ ಅಂದ್ರೆ, ಜಗತ್ತಿನಲ್ಲಿ ಅತೀ ದೊಡ್ಡ ಪಾರ್ಟಿ ಜನತಾ ಪಾರ್ಟಿ. ಮೋದಿಯಂತವರು ಇದ್ದಾಗಲೂ ಹೀಗೆ ಹೇಳುವುದು ಕೆಳಮಟ್ಟದ ಹೇಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಒಳಗೆ ಇದ್ದುಕೊಂಡು ಹೇಳಿಕೆ ಕೊಡೋದು ಸರಿಯಲ್ಲ ಎಂದು ರೇಣುಕಾಚಾರ್ಯ ಮಾತಿಗೆ ತಿರುಗೇಟು ನೀಡಿದ್ದಾರೆ.ರೇಣುಕಾಚಾರ್ಯ ಪಕ್ಷ ಬಿಡುತ್ತಾರೆ ಎನ್ನುವ ವಿಚಾರ ‘ ಅವರು ಪಕ್ಷ ಬಿಡೋದಿಲ್ಲ. ಯಾಕೋ ಮನಸ್ಸಿಗೆ ಬೇಜಾರಾಗಿದೆ ಅವರಿಗೆ, ಹೈಕಮಾಂಡ್ ಎಲ್ಲಾ ಗಮನಿಸ್ತಾ ಇದೆ. ಒಳ್ಳೆದಿನ ಬರುತ್ತದೆ, ಗಡಿಬಿಡಿ ಯಾಕೆ? ಜನ ರೆಸ್ಟ್ ಕೊಟ್ಟಿದ್ದಾರೆ. ಸ್ವಲ್ಪ ದಿನ ರೆಸ್ಟ್ ಮಾಡಲಿ ಎಂದರು.
ಲೋಕಸಭಾ ಟಿಕೆಟ್ ಕೇಳಿದ್ರಲ್ಲಿ ತಪ್ಪಿಲ್ಲ. ದಾವಣಗೆರೆ ಲೋಕಸಭೆಗೆ ಅಲ್ಲಿನ ಎಂಪಿ ನಿಲ್ಲಲ್ಲ ಅಂತಿದ್ದಾರೆ. ಹಾಗಾಗಿ ಟಿಕೆಟ್ ಕೇಳಿದ್ದಾರೆ, ಅದರಲ್ಲಿ ತಪ್ಪೇನಿದೆ. ಇನ್ನು ಉದಾಸಿ ಅವರೂ ನಿಲ್ಲೋದಿಲ್ಲವೆಂದು ಹೇಳಿದ್ದಾರೆ. ಸಹಜವಾಗಿ ಟಿಕೆಟ್ ಕೇಳಿದ್ದಾರೆ, ತಪ್ಪೇನು? ಅವರಿಗೆ ಅಧಿಕಾರ ಹಕ್ಕು ಎರಡು ಇದೆ. ಸಿಗುತ್ತೆ ಅಂದ್ರೆ, ಹೋರಾಟ ಮಾಡಲಿ ಎಂದು ಹೇಳಿದರು.