ಶ್ರೀಹರಿಕೋಟಾ, ಸೆ 01 (DaijiworldNews/MS): ಭಾರತದ ಚಂದ್ರಯಾನ-3 ರ ಯಶಸ್ಸಿನ ನಂತರ, ದೇಶವು ಮತ್ತೊಂದು ಮಹತ್ತರ ಸಾಧನೆಗೆ ಸಜ್ಜಾಗುತ್ತಿದ್ದು, ಈ ಬಾರಿ ಇಸ್ರೋ ಸೂರ್ಯನಿತ್ತ ದೃಷ್ಟಿ ಇಟ್ಟಿದೆ. ಇಸ್ರೋದ ಸೂರ್ಯ ಮಿಷನ್ ಆಗಿರುವ ಆದಿತ್ಯ ಎಲ್-1 ಗೆ ಕ್ಷಣಗಣನೆ ಆರಂಭವಾಗಿದೆ. ಈ ಮಿಷನ್ ನಾಳೆ ಬೆಳಗ್ಗೆ 11:50ಕ್ಕೆ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಲಾಂಚ್ ಆಗಲಿದೆ.
ಈ ಬಾಹ್ಯಾಕಾಶ ನೌಕೆಯನ್ನು PSLV-C57 ನಿಂದ ಉಡಾವಣೆ ಮಾಡಲಾಗುವುದು. ನೀವು ISRO ವೆಬ್ಸೈಟ್ isro.gov.in, Facebook ಖಾತೆ https://facebook.com/ISRO ಮತ್ತು youtube.com/watch?v=_IcgGYZTXQw ಯೂಟ್ಯೂಬ್ ಚಾನೆಲ್ನಲ್ಲಿ ಈ ಉಡಾವಣೆಯನ್ನು ಲೈವ್ ಆಗಿ ವೀಕ್ಷಿಸಬಹುದಾಗಿದೆ.
ಆದಿತ್ಯ L1 ಅನ್ನು ಸೂರ್ಯ-ಭೂಮಿಯ ವ್ಯವಸ್ಥೆಯ ಲಾಗ್ರೇಂಜ್ ಪಾಯಿಂಟ್ 1 (L1) ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾಗುತ್ತದೆ.
ಆದಿತ್ಯ ಎಲ್ 1 ಉಪಗ್ರಹವನ್ನು ಹೊತ್ತ ಪಿಎಸ್ಎಲ್ವಿ-ಸಿ57 ರಾಕೆಟ್ ನಭಕ್ಕೆ ಚಿಮ್ಮಿದ ಬಳಿಕ ರಾಕೆಟ್ ಉಪಗ್ರಹವನ್ನು ಕೆಳ ಮಟ್ಟದ ಭೂ ಕಕ್ಷೆಗೆ ತಲುಪಿಸಲಿದೆ. ನಂತರ ಉಪಗ್ರಹದಲ್ಲಿ ಇರುವ ಪ್ರೊಪಲ್ಶನ್ಗಳು ಎಂಜಿನ್ ರೀತಿ ಕಾರ್ಯ ನಿರ್ವಹಿಸಿ ಉಪಗ್ರಹವನ್ನು ನಿಧಾನವಾಗಿ ಭೂಮಿಯ ಗುರುತ್ವಾಕರ್ಷಣ ವಲಯದಿಂದ ಆಚೆಗೆ ಸಾಗಿಸಲಿದೆ. ಎಲ್ 1 ಕಕ್ಷೆಯ ಬಳಿ ಉಪಗ್ರಹ ತಲುಪಿದ ನಂತರ ಅದನ್ನು ಕ್ರೂಸ್ ಹಂತಕ್ಕೆ ತಲುಪಿಸಿ ಸುದೀರ್ಘ ಕಕ್ಷೆಯಲ್ಲಿ ಸ್ಥಿರಗೊಳಿಸಲಾಗುತ್ತದೆ. ಈ ಪ್ರಕ್ರಿಯೆ ಮುಕ್ತಾಯವಾಗಲು ಬರೋಬ್ಬರಿ 4 ತಿಂಗಳು ಬೇಕಾಗುತ್ತದೆ..