ಲಖನೌ,ಏ 10(MSP): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೂ ವಿವಾದಾತ್ಮಕ ಹೇಳಿಕೆಗೂ ಬಿಡಲಾರದ ನಂಟು. ಇದೀಗ ಅಂಥದ್ದೇ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಸಿಎಂ ಯೋಗಿ. ಮುಸ್ಲಿಂ ಲೀಗ್ ಎನ್ನುವುದು ಗ್ರೀನ್ ವೈರಸ್ ಇದ್ದ ಹಾಗೆ. ಈ ವೈರಸ್ ದೇಶ ವಿರೋಧಿ ಕೆಲಸ ಮಾಡಲು ಯತ್ನಿಸುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
ಈ ಗ್ರೀನ್ ವೈರಸ್ಗೆ ಕಾಂಗ್ರೆಸ್ ಪಕ್ಷ ಮಾತ್ರವಲ್ಲ, ಇದರೊಂದಿಗೆ ಬಿಎಸ್ಪಿ, ಎಸ್ಪಿ, ರಾಷ್ಟ್ರೀಯ ಲೋಕ ದಳವೂ ತುತ್ತಾಗಿದೆ. ಯಾರೆಲ್ಲಾ ಗ್ರೀನ್ ವೈರಸ್ ನೊಂದಿಗೆ ಇರುತ್ತಾರೋ ಅವರೆಲ್ಲಾ ದೇಶ ವಿರೋಧಿ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷಕ್ಕೆ ‘ಅಲಿ’ ಮೇಲೆ ವಿಶ್ವಾಸವಿದ್ದರೆ, ನಮಗೆ ಭಜರಂಗ್ ಬಲಿ ಮೇಲೆ ವಿಶ್ವಾಸವಿದೆ ಅಂತಾ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಬಿಎಸ್ಪಿ ವರಿಷ್ಠೆ ಮಾಯಾವತಿ ಮುಸ್ಲಿಂ ಮತ ಸೆಳೆಯಲು ದಲಿತರ ಭಾವನೆಯೊಂದಿಗೆ ಆಟವಾಡುತ್ತಿದ್ದಾರೆ. ಮುಸ್ಲಿಂ ಸಮುದಾಯ ಮತ್ತು ದಲಿತರು ಒಗ್ಗಟ್ಟಾಗಿರಲು ಯಾವತ್ತೂ ಸಾಧ್ಯವಿಲ್ಲ. ಮುಸ್ಲಿಮರು ವಿರೋಧ ಪಕ್ಷಗಳಿಗೆ ಮಾತ್ರ ಮತ ಹಾಕಬೇಕೆಂದು ಮಾಯಾವತಿ ಹೇಳಿದ್ದಾರೆ. ಈ ಮಾತಿನ ಅರ್ಥ ಏನು? ಹಾಗಿದ್ದರೆ ಹಿಂದೂಗಳಿಗೆ ಬಿಜೆಪಿಗೆ ಓಟು ಹಾಕದೆ ಬೇರೆ ದಾರಿಯಿಲ್ಲ ಎಂದು ಮಾಯಾವತಿ ವಿರುದ್ಧ ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ.