ಮೈಸೂರು, ಎ10(SS): ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೈಸೂರಿನಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಪ್ರಚಾರ ಭಾಷಣ ಮಾಡಿದ್ದರು. ಇದೀಗ ಮೋದಿ ಭಾಷಣದ ವೇಳೆ ತಮ್ಮ ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನೇ ಮರೆತು ಬಿಟ್ಟರಾ ಅನ್ನುವ ಮಾತುಗಳು ಇದೀಗ ಕೇಳಿಬರುತ್ತಿದೆ.
ಮೈಸೂರಿನಲ್ಲಿ ಮೋದಿ ಪ್ರಚಾರ ಭಾಷಣದ ವೇಳೆ ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನೇ ಉಲ್ಲೇಖಿಸದೇ ಭಾಷಣ ಮಾಡಿದ್ದಾರೆ ಎಂಬ ಅಪಸ್ವರಗಳು ಕೇಳಿಬರುತ್ತಿದೆ. ಭಾಷಣ ಆರಂಭಕ್ಕೂ ಮೊದಲು ‘ವೇದಿಕೆ ಮೇಲಿರುವ ನಮ್ಮ ಪಕ್ಷದ ಅಭ್ಯರ್ಥಿಗಳೇ,‘ ಎಂದು ಸಂಬೋಧಿಸಿದ್ದು ಬಿಟ್ಟರೆ, ಭಾಷಣದ ಉದ್ದಕ್ಕೂ ತಮ್ಮ ಪಕ್ಷದ ಯಾರ ಹೆಸರುಗಳನ್ನೂ ಕೊನೆಯವರೆಗೆ ಹೇಳದೇ ಅಂಬರೀಶ್ ಅವರನ್ನು ಮಾತ್ರ ನೆನಪಿಸಿಕೊಂಡರು ಎಂದು ಹೇಳಲಾಗುತ್ತಿದೆ.
ಚುನಾವಣಾ ಪ್ರಚಾರದ ವೇಳೆ ಅಂಬರೀಶ್ ನೆನದ ಮೋದಿ, ಸುಮಲತಾರನ್ನು ಬೆಂಬಲಿಸಿ. ಅಂಬರೀಶ್ ಕರ್ನಾಟಕಕ್ಕೆ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ, ಅಂಬರೀಶ್ ಅವರ ಜೊತೆ ಸೇರಿ ಸುಮಲತಾ ಅವರು ಕನ್ನಡಕ್ಕಾಗಿ ಕೆಲಸ ಮಾಡಿದ್ದಾರೆ. ನೀವೆಲ್ಲರೂ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡುತ್ತೀರೆಂದು ನಾನು ನಂಬಿದ್ದೇನೆ ಎಂದು ಮೋದಿ ಅವರು ಮೈಸೂರಿನಲ್ಲಿ ಹೇಳಿದ್ದರು.
ಅಂಬರೀಷ್, ಸುಮಲತಾ ಹೆಸರು ಹೇಳುತ್ತಿದ್ದಂತೆ ಕರತಾಡನ ಮುಗಿಲು ಮುಟ್ಟಿತು. ಸುಮಲತಾ ಮತ್ತು ಅಂಬರೀಷ್ ಅವರು ಕನ್ನಡ ಭಾಷೆ, ಸಂಸ್ಕೃತಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ಇಂಥವರ ಪ್ರಯತ್ನವನ್ನು ಬೆಂಬಲಿಸಬೇಕಾಗಿದೆ ಎಂದು ಮೋದಿ ತಿಳಿಸಿದರು.
ಇದೀಗ ಮೋದಿ ಭಾಷಣದ ವಿರುದ್ಧ ಕೆಲವೊಂದು ಟೀಕೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ವೇದಿಕೆಯಲ್ಲೇ ಇದ್ದ ಮೈಸೂರು–ಕೊಡಗು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ, ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ಶ್ರೀನಿವಾಸಪ್ರಸಾದ್ ಅವರ ಹೆಸರುಗಳನ್ನು ಮೋದಿ ಮೈಸೂರಿನಲ್ಲೇ ನಡೆದ ಸಮಾವೇಶದಲ್ಲಿ ಮರೆತರು ಎಂದು ಹೇಳಲಾಗುತ್ತಿದೆ.