ಬೆಂಗಳೂರು ಸೆ 02 (DaijiworldNews/MS): ಆದಿತ್ಯ ಎಲ್-1 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಸೂರ್ಯನ ಅಧ್ಯಯನದ ವಿಷಯದಲ್ಲಿ ಹೊಸದೊಂದು ಮೈಲಿಗಲ್ಲು ಸಾಧಿಸಿರುವ ಇಸ್ರೋ ವಿಜ್ಞಾನಿಗಳ ಪರಿಶ್ರಮ ಮತ್ತು ಬದ್ದತೆ ಶ್ಲಾಘನೀಯ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಬೋಸರಾಜು ಅಭಿನಂದಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ವಿಶ್ವದ ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ದೇಶದ ಸ್ಥಾನ, ಹೆಮ್ಮೆ ಮತ್ತು ಗೌರವಗಳನ್ನು ಹೆಚ್ಚಿಸುವಲ್ಲಿ ಇಸ್ರೋ ವಿಜ್ಞಾನಿಗಳ ಪಾತ್ರ ಮಹತ್ವದ್ದು. ಸೂರ್ಯ ಎಂಬ ಕೌತುಕದ ಅಧ್ಯಯನದ ಕಡೆಗೆ ನಮ್ಮ ವಿಜ್ಞಾನಿಗಳು ದಿಟ್ಟ ಹೆಜ್ಜೆಯನ್ನ ಇಟ್ಟಿದ್ದು, ಮುಂದಿನ ಎಲ್ಲಾ ಹಂತಗಳಲ್ಲೂ ಯಶಸ್ಸು ದೊರೆಯಲಿ ಎಂದು ಸಚಿವರು ಹಾರೈಸಿದ್ದಾರೆ.